Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga (901-945)

901

ನಾನು ನಾನೇ ನಾನೆನುತ್ತೆ ಕಿರಿಕೊಡದ ನೀರ್ |

ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ||

ನೂನದಿಂದೆಲ್ಲವೆನುವಬ್ಧಿಯೊಳಗದನಿರಿಸೆ |

ಮೌನವದು ಮಣ್ಕರಗಿ - ಮಂಕುತಿಮ್ಮ ||


902

ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ |

ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ||

ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು |

ಸಡಿಲುವುವು ಬಾಳ್ ಮಾಗೆ - ಮಂಕುತಿಮ್ಮ ||


903

ಮೋಕ್ಷದಾಶೆಯೊಳಮತ್ಯಾತುರತೆಯೊಳಿತಲ್ಲ |

ಶಿಕ್ಷೆ ಬಹುಕಾಲ ನಡೆಯದೆ ಮೋಕ್ಷವಿಲ್ಲ ||

ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯಧರ್ಮಗಳ |

ಮೋಕ್ಷ ಸ್ವತಸ್ಸಿದ್ಧ - ಮಂಕುತಿಮ್ಮ ||


904

ವಹಿಸು ಕೆಲ ಭಾರಗಳ; ಸಹಿಸು ಕೆಲ ನೋವುಗಳ |

ಪ್ರಹರಿಸರಿಗಳನನಿತು ಯುಕ್ತಗಳನರಿತು ||

ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು |

ವಿಹರಿಸಾತ್ಮಾಲಯದಿ - ಮಂಕುತಿಮ್ಮ ||


905

ಶ್ವಾನ ತಿಪ್ಪೆಯ ಮೇಲೆ ಮಲಗಿರಲು ಪೂರ್ವಿಕ- |

ಜ್ಞಾನ ಪಶ್ಚಾತ್ತಾಪ ಶುಭಚಿಂತೆಯಂತೆ ||

ಏನೊ ವಾಸನೆ ಬೀಸಲದು ಹಾರಿ ದುಮುಕುವುದು |

ಮಾನವನ ಮನಸಂತು - ಮಂಕುತಿಮ್ಮ ||


906

ತತ್ತ್ವಸಾಕ್ಷಾತ್ಕಾರ ಚಿತ್ತಶುದ್ಧಿಯಿನಹುದು |

ಚಿತ್ತಶೋಧನೆ ಮತಿಚಮತ್ಕಾರವಲ್ಲ ||

ಬಿತ್ತರದ ಲೋಕಪರಿಪಾಕದಿಂ, ಸತ್ಕರ್ಮ |

ಸಕ್ತಿಯಿಂ ಶುದ್ಧತೆಯೊ - ಮಂಕುತಿಮ್ಮ ||


907

ತನುರುಜೆಗೆ ಪಥ್ಯಾನ್ನ, ಬಾಯ ಚಪಲಕ್ಕಲ್ಲ |

ಮನದ ಶಿಕ್ಷೆಗೆ ಲೋಕ, ಮಮಕಾರಕಲ್ಲ ||

ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ |

ಮುನಿವೃತ್ತಿ ಸೂತ್ರವಿದು - ಮಂಕುತಿಮ್ಮ ||


908

ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ |

ನಿಜಕುಕ್ಷಿಚಿಂತೆಯೇಂ ಮೊದಲು ಮನೆತಾಯ್ಗೆ? ||

ಭುಜಿಪ ಪತಿಸುತರೊಪ್ಪು ತುಪ್ಪವವಳೂಟಕ್ಕೆ |

ಭಜಿಸು ನೀನಾ ವ್ರತವ - ಮಂಕುತಿಮ್ಮ ||


909

ಮಗುವಾಗಿ ಬೊಂಬೆಗೆಂದತ್ತು ಪಿರಿಯರ ಕಾಡಿ |

ಜಗದುಣಿಸುಗಳನುಂಡು ಬೆಳೆದವಂ ತಾನೆ ||

ಮಗುಗಳನು ಬೆಳಸುತ್ತ ಮನೆಯನಾಳುವವೋಲು |

ಜಗವನಾಳ್ವನು ಜಾಣ - ಮಂಕುತಿಮ್ಮ ||


910

ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು |

ಭೂಮಿಪತಿಪಟ್ಟವನು ಜನ ತನಗೆ ಕಟ್ಟಲ್ ||

ಸಾಮರ್ಥ್ಯದಿಂದವರನಾಳ್ದ ಲಿಂಕನನಂತೆ |

ಸ್ವಾಮಿ ಲೋಕಕೆ ಯೋಗಿ - ಮಂಕುತಿಮ್ಮ ||


911

ರಣದಿ ಬಿದ್ದಾ ಸೈನ್ಯಪತಿ ಸಿಡ್ನಿಯುತ್ಕ್ರಮಣ- |

ದೊಣಗುಬಾಯಿಗೆ ನೀರನೊಡ್ಡಲ್ ಅದನವನು ||

ತನಗಿಂತ ಕೆಲದ ಭಟಗದು ಸಲ್ವುದೆಂದಿತ್ತು |

ತಣಿವನಾಂತುದ ನೆನೆಯೊ - ಮಂಕುತಿಮ್ಮ ||


912

ಇಂದ್ರಿಯಗಳೊಳು ಬಾಳಿ ಜೀವ ಪಕ್ವಂಗೊಳ್ಳ- |

ಲಿಂದ್ರಿಯಂಗಳ ಮೀರಿ ಮೇಲೇರಿ ಜಾಣಿಂ- ||

ದಿಂದ್ರಿಯಂಗಳನಾಳಿ ಲೋಕವಂ ಸಂತಯಿಪ |

ಬಂಧು ಜೀವನ್ಮುಕ್ತ - ಮಂಕುತಿಮ್ಮ ||


913

ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು |

ಕತ್ತಲೆಯ ಮೊಡಕು ಮೂಲೆಗಳ ಸೇರದಿರು ||

ಭಾಸ್ಕರನನುಗ್ರಹವೆ ನೂತ್ನ ಜೀವನಸತ್ತ್ವ |

ಮೃತ್ಯು ನಿನಗಲ್ಪತೆಯೊ - ಮಂಕುತಿಮ್ಮ ||


914

ತೆರೆಯಾಗು ವಿಶ್ವಜೀವನದ ದಿವ್ಯಾಬ್ಧಿಯಲಿ |

ಕರಗಿಸದರಲಿ ನಿನ್ನ ಬೇರೆತನದರಿವ ||

ಮರುತನುರುಬನು ತಾಳುತೇಳುತೋಲಾಡುತ್ತ |

ವಿರಮಿಸಾ ಲೀಲೆಯಲಿ - ಮಂಕುತಿಮ್ಮ ||


915

ಬರಿಯ ಪೊಳ್ಳುವಿಚಾರ ಮಾನುಷವ್ಯಾಪಾರ |

ಪರಿಕಿಸಲು ಪುಣ್ಯವೆಂಬುದುಮಹಂಕಾರ ||

ಅರಳಿ ಮೊಗವನಿತಿನಿತು, ನಕ್ಕು ನಗಿಸಿರೆ ಸಾರ |

ಹೊರೆ ಮಿಕ್ಕ ಸಂಸಾರ - ಮಂಕುತಿಮ್ಮ ||


916

ಜನ್ಮ ಸಾವಿರ ಬರಲಿ, ನಷ್ಟವದರಿಂದೇನು? |

ಕರ್ಮ ಸಾವಿರವಿರಲಿ, ಕಷ್ಟ ನಿನಗೇನು? ||

ಬ್ರಹ್ಮ ಹೃದಯದಿ ನಿಲ್ಲೆ ಮಾಯೆಯೇಂಗೈದೊಡೇಂ? |

ಇಮ್ಮಿದಳ ಸರಸವದು - ಮಂಕುತಿಮ್ಮ ||


917

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ |

ನಗುವ ಕೇಳುತ ನಗುವುದತಿಶಯದ ಧರ್ಮ ||

ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |

ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ ||


918

ನೆನೆನೆನೆದು ಗಹನವನು, ಜೀವನರಹಸ್ಯವನು |

ಮನವ ಬಳಲಿಸಿ ಸೋಲಿಸಿರುವ ತತ್ತ್ವವನು ||

ಮನನದೇಕಾಂತದಲಿ ಮೌನದ ಧ್ಯಾನದಲಿ |

ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ ||


919

ಜೀವದುದಯ ರಹಸ್ಯ, ಜೀವವಿಲಯ ರಹಸ್ಯ |

ಜೀವನದ ದೃಶ್ಯ ಮರುವಿನ ಬಿಸಿಲ್ಗುದುರೆ ||

ಭಾವಿಸಲಿದೇ ತತ್ತ್ವ : ಬ್ರಹ್ಮಮಾಯೆಯೆ ವಿಶ್ವ |

ಕೇವಲಾತ್ಮ ಬ್ರಹ್ಮ - ಮಂಕುತಿಮ್ಮ ||


920

ಆರಲೆನ್ನಯ ಹೃದಯ ಕರಣಗಳ ಕಾವುಗಳು |

ಸೇರಲೆನ್ನಯ ಜೀವ ವಿಶ್ವಜೀವನದಲಿ ||

ಧಾರುಣಿಯ ಮಡಿಲೆನ್ನ ಕೊಳಲಿ; ಜಗ ಮರೆತಿರಲಿ |

ಹಾರಯಿಸು ನೀನಿಂತು - ಮಂಕುತಿಮ್ಮ ||


921

ಇಳಿಯುವೆನು ಮುಳುಗುವೆನು ವಿಶ್ವಾತ್ಮಸಾಗರದಿ |

ಮುಳುಮುಳುಗಿ ಕಳೆಯುವೆನು ಬೇರೆತನದರಿವ ||

ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು |

ಗಳಿಸೀ ಮನಃಸ್ಥಿತಿಯ - ಮಂಕುತಿಮ್ಮ ||


922

ಎಲ್ಲರಿಗಮೀಗ ನಮೊ---ಬಂಧುಗಳೆ, ಭಾಗಿಗಳೆ |

ಉಲ್ಲಾಸವಿತ್ತವರೆ, ಮನವ ತೊಳೆದವರೆ ||

ಟೊಳ್ಳು ಜಗ, ಸಾಕು ಬಾಳ್---ಎನಿಸಿ ಗುರುವಾದವರೆ |

ಕೊಳ್ಳಿರೀ ನಮವನೆನು - ಮಂಕುತಿಮ್ಮ ||


923

ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ |

ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ||

ದಿನವ ಕಳೆ; ಗುರುಶಿಷ್ಯಪಟ್ಟಗಳು ನಿನಗೇಕೆ? |

ನಿನಗೆ ನೀನೇ ಗುರುವೊ - ಮಂಕುತಿಮ್ಮ ||


924

ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ |

ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ||

ಬಣಗು ಕುರಿಚಲು ಗಿಡದ ಬಾಳೇನು? ನೀನಂತು |

ಒಣಗಿದೊಡೆ ಸವುದೆ ಸರಿ - ಮಂಕುತಿಮ್ಮ ||


925

ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು |

ಹೇಳುತ್ತ ಹಾಡುಗಳ, ಭಾರಗಳ ಮರೆತು ||

ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ |

ಬಾಳ ನಡಸುವುದೆಂದೊ? - ಮಂಕುತಿಮ್ಮ ||


926

ತೊಲಗೆಲವೊ ಮನೆಯಿಂದ ಮನವು ಬರಡಾದಂದೆ |

ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ||

ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ |

ತೊಲಗಿ ನೀಂ ಮರೆಯಾಗು - ಮಂಕುತಿಮ್ಮ ||


927

ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ |

ಒಲವ ಬೇಡಿಸದೆಡೆಗೆ; ಅಳುವು ಬರದೆಡೆಗೆ ||

ವಿಲಯವಾಗಿಸಿ ಮನವನ್, ಅಲುಗಾಡಿಸದೆ ತುಟಿಯ |

ತೊಲಗಿ ಮಲಗಲ್ಲಿ ನೀಂ - ಮಂಕುತಿಮ್ಮ ||


928

ಕಡೆಗಾಲವನು ತಾನೆ ಮುನ್ನರಿತು ಕಾಡಾನೆ- |

ಯಡವಿಯೊಳದೊಂದು ದೂರದ ಗವಿಯನೈದಿ ||

ಬಿಡುವುದಾಯೆಡೆ ಮೌನದಿಂದಸುವನೆನ್ನುವರು |

ಕಡೆಯ ಸಾರಂತು ನೀಂ - ಮಂಕುತಿಮ್ಮ ||


929

ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ |

ಒದ್ದಾಟ ಗುದ್ದಾಟ ಬಾಳೆಲ್ಲವಾಯ್ತು ||

ಗದ್ದಲವ ಬಿಡಲು ಕಡೆದಿನವಾನುಮಾದೀತೆ? |

ನಿದ್ದೆವೊಲು ಸಾವ ಪಡೆ - ಮಂಕುತಿಮ್ಮ ||


930

ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ |

ಯಾರ ಭುಜಕಂ ನಿನ್ನ ಭಾರವಾಗಿಸದೆ ||

ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ |

ಪಾರಗಾಣಿಸ ಬೇಡು - ಮಂಕುತಿಮ್ಮ ||


931

ವೇದಾಂತವಾಕ್ಯಗಳ ನಮಕಾನುವಾಕಗಳ |

ಕೇದಾರಗೌಳ ಮಣಿರಂಗಾರಭಿಗಳ ||

ನಾದಂಗಳಲಿ ಮನವ ಬೆರಸಿ ನೀನುತ್ಕ್ರಮಿಸೆ |

ಸಾಧನವೊ ಮುಕ್ತಿಗದು - ಮಂಕುತಿಮ್ಮ ||


932

ಮೋಹನಾನಂದಭೈರವಿ ಶಂಕರಾಭರಣ |

ಶಾಹನ ಕುರಂಜಿ ಕೇದಾರ ಕಾಪಿಗಳ ||

ಮೋಹ ಸರ್ವಸ್ವಗಳ ರಾಗಾಬ್ಧಿಯೋ ಬ್ರಹ್ಮ |

ಗಾಹಿಸದರೊಳಗೆ ನೀಂ - ಮಂಕುತಿಮ್ಮ ||


933

ಕಷ್ಟ ಜೀವದ ಪಾಕ; ಕಷ್ಟ ಧರ್ಮವಿವೇಕ |

ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ||

ಇಷ್ಟಷ್ಟು ನಿನ್ನೊಳ್ ಒಳತಿಳಿವಿಲ್ಲದಿರೆ ನಷ್ಟ |

ದೃಷ್ಟಿಸೂಕ್ಷ್ಮವೆ ಗತಿಯೊ - ಮಂಕುತಿಮ್ಮ ||


934

ನೂರಾರು ಮತವಿಹುದು ಲೋಕದುಗ್ರಾಣದಲಿ |

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ||

ಸಾರದಡುಗೆಯನೊಳವಿಚಾರದೊಲೆಯಲಿ ಮಾಡು |

ಬೇರೆ ಮತಿ ಬೇರೆ ಮತ - ಮಂಕುತಿಮ್ಮ ||


935

ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ |

ಅನುವಪ್ಪುದೊಂದೊಂದು ರೋಗಕೊಂದೊಂದು ||

ನಿನಗಮಂತೆಯೆ ನೂರು ನೀತಿಸೂತ್ರಗಳಿರಲು |

ಅನುವನರಿವುದೆ ಜಾಣು - ಮಂಕುತಿಮ್ಮ ||


936

ವಿಶದಮಾದೊಂದು ಜೀವನಧರ್ಮದರ್ಶನವ- |

ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||

ನಿಸದವಂ ಗ್ರಂಥಾನುಭವಗಳಿಂದಾರಿಸುತ |

ಹೊಸೆದನೀ ಕಗ್ಗವನ - ಮಂಕುತಿಮ್ಮ ||


937

ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು |

ಗದ್ಯ ಲೌಕಿಕ ತಾತ್ತ್ವಿಕಕ್ಕಚ್ಚುಕಟ್ಟು ||

ಮಧ್ಯದಲಿ ಮಿಸುಕಿ, ನೆಲಬಿಟ್ಟು ಬಾನ್ ಮುಟ್ಟದಿಹ |

ಪದ್ಯವಧಿಕಪ್ರಸಂಗಿ - ಮಂಕುತಿಮ್ಮ ||


938

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ |

ಅವನಿರಿವಿಗೆಟುಕುವವೊಲೊಂದಾತ್ಮನಯವ ||

ಹವಣಿಸಿದನಿದನು ಪಾಮರಜನದ ಮಾತಿನಲಿ |

ಕವನ ನೆನಪಿಗೆ ಸುಲಭ - ಮಂಕುತಿಮ್ಮ ||


939

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ |

ಇಂದು ನಂಬಿಹುದೆ ಮುಂದೆಂದುಮೆಂದಲ್ಲ ||

ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು |

ಇಂದಿಗೀ ಮತವುಚಿತ - ಮಂಕುತಿಮ್ಮ ||


940

ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ |

ಲೋಕತಾಪದಿ ಬೆಂದು ತಣಿಪನೆಳಸಿದವಂ ||

ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು |

ಸ್ವೀಕರಿಕೆ ಬೇಳ್ವವರು - ಮಂಕುತಿಮ್ಮ ||


941

ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ |

ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೋ ||

ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು |

ಶಂಕೆ ನಿನಗೇನಿಹುದೊ - ಮಂಕುತಿಮ್ಮ ||


942

ಹರಸುವುದದೇನ ನೀಂ? ವರವದೇನೆಂದರಿವೆ? |

ಸರಿಯಿಂದು ತೋರುವುದು ನಾಳೆ ಸರಿಯಿಹುದೆ? ||

ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು? |

ಅರಿವ ದೈವವೆ ಪೊರೆಗೆ - ಮಂಕುತಿಮ್ಮ ||


943

ಬೇಡಿದುದನೀವನೀಶ್ವರನೆಂಬ ನಚ್ಚಿಲ್ಲ |

ಬೇಡಲೊಳಿತಾವುದೆಂಬುದರರಿವುಮಿಲ್ಲ ||

ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ |

ನೀಡುಗೆದೆಗಟ್ಟಿಯನು - ಮಂಕುತಿಮ್ಮ ||


944

ತಮ್ಮೆಲ್ಲ ಹಸಿವುಗಳ ತಣಿಯಿಪನಿತನ್ಯೋನ್ಯ |

ಹೊಮ್ಮುಗೌದಾರ್ಯ ಜನಜನಪದಂಗಳಲಿ ||

ಬೊಮ್ಮನೆಲ್ಲರನಾಳ್ವನಿಹನೆನುವ ನೆನಪಿನಲಿ |

ನೆಮ್ಮದಿಯ ಪಡೆಗೆ ಜಗ - ಮಂಕುತಿಮ್ಮ ||


945

ಶರಣುವೊಗು ಜೀವನರಹಸ್ಯದಲಿ ಸತ್ತ್ವದಲಿ |

ಶರಣು ಜೀವನವ ಸುಮವೆನಿಪ ಯತ್ನದಲಿ ||

ಶರಣಂತರಾತ್ಮಗಂಭೀರಪ್ರಶಾಂತಿಯಲಿ |

ಶರಣು ವಿಶ್ವಾತ್ಮದಲಿ - ಮಂಕುತಿಮ್ಮ ||


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post