Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 501-550

 501

ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ |

ಶಕ್ತಿ ಚತುರತೆಯುಡುಗಿ ನೀನು ಸೋತಂದು ||

ಉತ್ಕ್ರಮಣದರೆಮನದಿ ದೈವವನು ಪಿಡಿದೇನು? |

ಭಕ್ತಿ ರಕ್ತದಿ ಪರಿಗೆ - ಮಂಕುತಿಮ್ಮ ||


502

ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- |

ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||

ಇಷ್ಟವಾತನೊಳುದಿಸುವಂತೆ, ಚೋದಿಪುದೆಂತು? |

ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ||


503

ಜೀವಸತ್ತ್ವದಪಾರಭಂಡಾರವೊಂದಿಹುದು |

ಸಾವಕಾರನದೃಷ್ಟನ್ ಅದನಾಳುತಿಹನು ||

ಆವಶ್ಯಕದ ಕಡವನವನೀವುದುಂಟಂತೆ! |

ನಾವೊಲಿಪುದೆಂತವನ? - ಮಂಕುತಿಮ್ಮ ||


504

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ |

ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ||

ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ |

ಮುಗಿಲವೊಲು ದೈವಕೃಪೆ - ಮಂಕುತಿಮ್ಮ ||


505

ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ |

ಜೀವಗುಣ ಪಕ್ವಪಟ್ಟಂತದರ ವೇಗ ||

ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ |

ತೀವಿ ದೊರೆಕೊಳುವುದದು - ಮಂಕುತಿಮ್ಮ ||


506

ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ |

ಸರಿ ತನಗೆ ತೋರ್ದನಿತನ್ ಅದರೊಳವನೀವಂ ||

ಅರಿಕೆಯೆಲ್ಲವ ನಡಸದಿರೆ ದೊರೆಯೆ ಸುಳ್ಳಹನೆ? |

ಕರುಣೆ ನಿರ್ಬಂಧವೇಂ? - ಮಂಕುತಿಮ್ಮ ||


507

ದಂಡನಿರ್ಣಯದಿ ನೀಂ ಕ್ಷಮಿಸೆನಲ್ ನ್ಯಾಯಪತಿ |

ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ||

ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು |

ಕುಂದಿಸಲಿಕಾಗದೇಂ? - ಮಂಕುತಿಮ್ಮ ||


508

ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ |

ಒಕ್ಕುವುದು ಬಿಡದೆ ಜೀವಿಯ ಪಾಪಚಯವ ||

ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ |

ಭಕ್ತಿ ಪಶ್ಚಾತ್ತಾಪ - ಮಂಕುತಿಮ್ಮ ||


509

ಪ್ರಾರಬ್ಧದಲಿ ನಿನ್ನ ಪುಣ್ಯವಿನಿತಾನುಮಿರೆ |

ಸೇರೆ ಪಶ್ಚಾತ್ತಾಪ ಭಾರವದರೊಡನೆ ||

ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು |

ಕಾರುಣ್ಯದಿಂ ದೈವ - ಮಂಕುತಿಮ್ಮ ||


510

ನಿನ್ನೇಳುಬೀಳುಗಳು ನಿನ್ನ ಸೊಗ ಗೋಳುಗಳು |

ನಿನ್ನೊಬ್ಬನೋಸುಗವೆ ನಡೆವ ಯೋಜನೆಯೇಂ? ||

ಇನ್ನದೆನಿಬರ ಜೀವಪಾಕವದರಿಂದಹುದೊ! |

ಛನ್ನವಾ ಋಣಮಾರ್ಗ - ಮಂಕುತಿಮ್ಮ ||


511

ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ? |

ನರಕದರ್ಶನದುಃಖ ತಪ್ಪದಾಯಿತಲ? ||

ದುರಿತತರುವಾರು ನೆಟ್ಟುದೊ, ನಿನಗಮುಂಟು ಫಲ |

ಚಿರಋಣದ ಲೆಕ್ಕವದು - ಮಂಕುತಿಮ್ಮ ||


512

ಆವ ಋಣಕೋಸುಗವೊ, ಆರ ಹಿತಕೋಸುಗವೊ |

ಆವಾವ ಕಾರಣಕೊ, ಆವ ಯೋಜನೆಗೋ ||

ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? |

ದೈವ ಕುರುಡೆನ್ನದಿರು - ಮಂಕುತಿಮ್ಮ ||


513

ಆವುದರಿನಾವಾಗ ದೈವ ತಾನೊಲಿದೀತೊ? |

ಪೂರ್ವಿಕದ ನಿಯತಿಯನದೆಂದು ಸಡಲಿಪುದೋ? ||

ಭಾವಿಸುಕೃತವದೆಂದು ಪೂರ್ವದುರಿತಕೆ ಮಿಗಿಲೊ? |

ದೈವಿಕರಹಸ್ಯವದು - ಮಂಕುತಿಮ್ಮ ||


514

ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- |

ವನುಮಿತಿಯ ನೀಂ ಗೆಯ್ಯೆ, ಸುಖಿಯದೇನೆನುವಂ? ||

ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ- |

ದನುಭವವ ನೀನರಸೊ - ಮಂಕುತಿಮ್ಮ ||


515

ಎನ್ನ ಬೇಡಿಕೆ ನಷ್ಟವಹುದೆಂತು ದೇವನಿರೆ? |

ಅನ್ಯಾಯ ಜಗವೆಲ್ಲ; ದೇವನಿರನೆನುತ ||

ತನ್ನ ತನ್ನನುಭವವ ನಂಬಲೋರೊರ್ವನುಂ |

ಭಿನ್ನವಾಗದೆ ಸತ್ಯ? - ಮಂಕುತಿಮ್ಮ ||


516

ಅನುಭವದ ಪರಿ ನೂರ್ವರಿಗೆ ನೂರು ನೂರು ಪರಿ |

ದಿನವೊಂದರೊಳೆ ಅದೊಬ್ಬಂಗೆ ನೂರು ಪರಿ ||

ಎಣಿಪುದಾರನುಭವವನ್, ಆವ ಪ್ರಮಾಣದಲಿ? |

ಮಣಲ ಗೋಪುರವೊ ಅದು - ಮಂಕುತಿಮ್ಮ ||


517

ಮನುಜಸಾಕಲ್ಯದನುಭವಕೆ ಮಿತಿಗೊತ್ತುಂಟೆ? |

ದಿನದಿನವು ಕಡಲಲೆಗಳಂತೆ ಪರಿವುದದು ||

ಅನುಮಿತಿಯ ನಿರ್ಧಾರವದರಿಂ ನಿರಾಧಾರ |

ದನಿ ನೂರು ನರನೆದೆಗೆ - ಮಂಕುತಿಮ್ಮ ||


518

ಅರ್ಥವುಂಟನುಭವಕ್ಕಾದೊಡದು ಮಿತದರ್ಥ |

ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ||

ಸಾರ್ಥಕವದಪ್ಪುದಾರ್ಷೇಯಾರ್ಥದೊಡವೆರೆಯೆ |

ಪಾರ್ಥನನುಭವದಂತೆ - ಮಂಕುತಿಮ್ಮ ||


519

ಪ್ರಾಲೇಯಗಿರಿಗುಹೆಯ ಗಂಗೆ ವೇದ ಪುರಾಣ |

ಕಾಳಿಂದಿ ಶೋಣೆ ಪೌರುಷ ಬುದ್ಧಿಯುಕ್ತಿ ||

ಮೂಲ ಸ್ವತಸ್ಸಿದ್ಧ ಸಂವಿದಾಪಗೆಗಿಂತು |

ಕಾಲದುಪನದಿ ನೆರವು - ಮಂಕುತಿಮ್ಮ ||


520

ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ |

ಹಳದೆಂದು ನೀನದನು ಕಳೆಯುವೆಯ, ಮರುಳೆ? ||

ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ? |

ಹಳೆ ಬೇರು ಹೊಸ ತಳಿರು - ಮಂಕುತಿಮ್ಮ ||


521

ವೇದ ಲೋಕಾಚಾರ ನಿನ್ನನುಭವದ ಯುಕ್ತಿ |

ಶೋಧಿಸೀ ಮೂರನುಂ ಸಂವಾದಗೊಳಿಸು ||

ಸಾಧಿತಜ್ಞಾನ ನರಸಾಧ್ಯ ಪ್ರಮಾಣವದು |

ಹಾದಿ ಬೆಳಕದು ನಿನಗೆ - ಮಂಕುತಿಮ್ಮ ||


522

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು |

ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ||

ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |

ಜಸವು ಜನಜೀವನಕೆ - ಮಂಕುತಿಮ್ಮ ||


523

ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ |

ಹಾದಿತೋರಲು ನಿಶಿಯೊಳುರಿವ ಪಂಜುಗಳು ||

ಸೌಧವೇರಿದವಂಗೆ, ನಭವ ಸೇರಿದವಂಗೆ |

ಬೀದಿಬೆಳಕಿಂದೇನೊ? - ಮಂಕುತಿಮ್ಮ ||


524

ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು |

ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ? ||

ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳುವು |

ಅರಸು ಜೀವಿತ ಹಿತವ - ಮಂಕುತಿಮ್ಮ ||


525

ಜಗ ಬೆಳೆದು ಚಿಗುರುತಿರೆ ಶಾಸ್ತ್ರ ಕರಟಿರಲಹುದೆ? |

ನಿಗಮಸಂತತಿಗೆ ಸಂತತಿಯಾಗದಿಹುದೆ? ||

ಬಗೆಬಗೆಯ ಜೀವಸತ್ತ್ವವಿಕಾಸವಾಗುತಿರ- |

ಲೊಗೆವುದೈ ವಿಜ್ಞಾನ - ಮಂಕುತಿಮ್ಮ ||


526

ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ |

ಜರೆಯಿಂದ ಬರಡಹುದು ಮಠದ ನೆರಳಿನಲಿ ||

ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ |

ನೆರೆಯಲಾ ತರು ಸೊಂಪು - ಮಂಕುತಿಮ್ಮ ||


527

ಜೀವಕಾರಣಮೂಲ ಗೂಢವಾಗಿರ್ದೊಡಂ |

ಧೀವಿಕಾಸದ ಬೆಳಕನಾದನಿತು ಗಳಿಸಿ ||

ಕೈವಲ್ಯಪಥವನರಸುತ ಯಾತ್ರಿಸಲೆಬೇಕು |

ದೀವಿಗೆಯು ಮತಿಯೊಂದೆ - ಮಂಕುತಿಮ್ಮ ||


528

ಭಕ್ತಿ ನಂಬುಗೆ ಸುಲಭ; ಭಜನೆ ವಂದನೆ ಸುಲಭ |

ತತ್ತ್ವಶೋಧನೆ ಕಷ್ಟ; ಮತಿಕಾರ್ಯ ಕಷ್ಟ ||

ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ |

ಹತ್ತುವನು ತಾಪಸಿಯೊ - ಮಂಕುತಿಮ್ಮ ||


529

ಪರದೈವವನು ತೊರೆಯೆ ಗತಿ ನರನಿಗಿಲ್ಲ ದಿಟ |

ನರನಿಲ್ಲದಿರೆ ದೇವನನು ಕೇಳ್ವರಾರು? ||

ಪುರುಷತೆಯೆ ಸೇತುವೆ ಮೃಗತ್ವದಿಂ ದಿವ್ಯತೆಗೆ |

ಮುರಿಯದಿರು ಸೇತುವೆಯ - ಮಂಕುತಿಮ್ಮ ||


530

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ |

ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ ||

ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ |

ಸಣ್ಣತನ ಸವೆಯುವುದು - ಮಂಕುತಿಮ್ಮ ||


531

ಶಶ್ವದ್ವಿಕಾಸನ ಹ್ರಾಸನ ಕ್ರಮಗಳಿಂ |

ವಿಶ್ವದಲಿ ನರ್ತಿಸುತೆ ಪೌರುಷೋನ್ನತಿಯೊಳ್ ||

ಸ್ವಸ್ವರೂಪವನರಸುವಾಟ ಪರಚೇತನದ |

ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ ||


532

ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? |

ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ||

ಸೃಷ್ಟಿಕೋಟೆಯಲಿ ನೀನೊಂದಿಟಿಕೆ; ಸೊಟ್ಟಾಗೆ |

ಪೆಟ್ಟು ತಿನ್ನುವೆ ಜೋಕೆ - ಮಂಕುತಿಮ್ಮ ||


533

ಪುರುಷಂ ಸ್ವತಂತ್ರನೋ? ದೈವವಿಧಿ ಪರವಶನೊ? |

ಎರಡುಮನಿತಿನಿತುಳ್ಳ ತೋಳಿನಂತಿಹನೋ? ||

ತಿರುಗುವುದು ಮಡಿಸುವುದು ತೋಳ್ ಮೈಯಕಟ್ಟಿನಲಿ |

ನರನಂತು ಮಿತಶಕ್ತ - ಮಂಕುತಿಮ್ಮ ||


534

ಹರಡುವುದು ಸಾಜ ವಾಯುಗೆ ಸೈಸದದು ತಡೆಯನ್ |

ಉರುಳಿಪುದದೆಲ್ಲವನು ತಡೆಗಳಿಲ್ಲದಿರೆ ||

ನರನ ಸ್ವತಂತ್ರಗತಿಯಂತು ಹಿತಮಿತವಿರಲು |

ಅರಸೊ ಮಿತಿಯಾಯತಿಯ - ಮಂಕುತಿಮ್ಮ ||


535

ನೀರ ನೆರೆ ತನ್ನೆದುರಿನಣೆಕಟ್ಟನೊದೆಯುವುದು |

ಊರನದು ಕೊಚ್ಚುವುದು ಬದಿಯ ಕಟ್ಟದಿರೆ ||

ಏರಿಗಳನಿಕ್ಕೆಲದಿ ನಿಲಿಸೆ ಹರಿವುದು ಸಮನೆ |

ಪೌರುಷದ ನದಿಯಂತು - ಮಂಕುತಿಮ್ಮ ||


536

ಎಸಳಿನಡಿ ಗಿಡದ ಬಿಗಿ; ಮೇಲೆ ಗಾಳಿಯ ಸರಸ |

ಕುಸುಮದ ಕ್ಷೇಮವಾ ಬಿಗಿತ ಬಿಡುತೆಗಳಿಂ ||

ಕುಶಲ ಸೌರಭವ ನಿರ್ಯತ್ನ ಸ್ವತಂತ್ರದಿಂ |

ಪಸರಿಪಾ ನಯ ಸುಖವೊ - ಮಂಕುತಿಮ್ಮ ||


537

ತರಣಿಶಶಿಪಥಗಳನು, ಧರೆವರುಣಗತಿಗಳನು |

ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ ||

ನರನರಸಿಕೊಳಲಿ ದಾರಿಯ ತನಗೆ ತಾನೆಂದು |

ತೊರೆದನೇತಕೆ ನಮ್ಮ? - ಮಂಕುತಿಮ್ಮ ||


538

ತನ್ನ ಬೆವರಿನ ಕೊಳದಿ ತಾಂ ಮುಳುಗಿ ತೇಲುತ್ತೆ |

ಧನ್ಯನಾನೆನ್ನುವನದೊರ್ವ ಸ್ವತಂತ್ರನ್ ||

ಪುಣ್ಯತೀರ್ಥದೊಳಿಳಿದು ಕರಗಲ್ ಸ್ವತಂತ್ರ ತಾನ್ |

ಎನ್ನುವವನಿನ್ನೊರ್ವ - ಮಂಕುತಿಮ್ಮ ||


539

ಬರಿಯ ಬುದ್ಧಿವಿಮರ್ಶೆಗರಿದು ಜೀವನತತ್ತ್ವ |

ಪರಿಶೋಧಿಸುವರಾರು ಬುದ್ಧಿಋಜುತೆಯನು? ||

ಸ್ಫುರಿಸುವುದದೆಂದೊ ತಾನೇ ಮಿಂಚುಬಳ್ಳಿವೊಲು |

ಪರತತ್ತ್ವ ಮನದೊಳಗೆ - ಮಂಕುತಿಮ್ಮ ||


540

ನರವಿವೇಕವದೇನು ಬರಿಯ ಮಳೆನೀರಲ್ಲ |

ಕೆರೆಯ ನೀರ್ ಊರ ಮೈಸೋಂಕುಗಳ ಬೆರಕೆ ||

ಧರೆಯ ರಸವಾಸನೆಗಳಾಗಸದ ನಿರ್ಮಲದ |

ವರವ ಕದಡಾಗಿಪುವು - ಮಂಕುತಿಮ್ಮ ||


541

ಪ್ರಾಕ್ತನದ ವಾಸನೆಯೆ ಮನಕೆ ಮೊದಲಿನ ಮಂತ್ರಿ |

ಯುಕ್ತಿಗಳ ತನಗೊಪ್ಪುವಂತೆ ತಿರುಗಿಪುದು ||

ಸೂಕ್ತವೆನಿಪುದು ಸಹಜರುಚಿ ತನ್ನ ತರ್ಕವನೆ |

ಗುಪ್ತದೊಳು ಕುಟಿಲವಿದು - ಮಂಕುತಿಮ್ಮ ||


542

ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ |

ಬೀಸೆ ಮನದುಸಿರು ಮತಿದೀಪವಲೆಯುವುದು ||

ವಾಸನೆಗಳನುಕೂಲ ಸತ್ಯತರ್ಕತೆ ಶೂಲ |

ಶೋಷಿಸಾ ವಾಸನೆಯ - ಮಂಕುತಿಮ್ಮ ||


543

ಭಾವದಾವೇಶದಿಂ ಮನವಶ್ವದಂತಿರಲಿ |

ಧೀವಿವೇಚನೆಯದಕೆ ದಕ್ಷರಾಹುತನು ||

ತೀವಿದೊಲವಿನ ದಂಪತಿಗಳಾಗೆ ಮನಬುದ್ಧಿ |

ಜೀವಿತವು ಜೈತ್ರಕಥೆ - ಮಂಕುತಿಮ್ಮ ||


544

ಅನುಭವದ ಪಾಲೊಳು ವಿಚಾರ ಮಂಥನವಾಗೆ |

ಜನಿಯಿಕುಂ ಜ್ಞಾನನವನೀತವದೆ ಸುಖದಂ ||

ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |

ನಿನಗೆ ಧರುಮದ ದೀಪ - ಮಂಕುತಿಮ್ಮ ||


545

ಬುದ್ಧಿಪ್ರಕಾಶದಿಂದಂತರನುಭವಶೋಧೆ |

ಸಿದ್ಧವಾ ಶೋಧೆಯಿಂ ಸತ್ಯಸಂವೀಕ್ಷೆ ||

ಶುದ್ಧಸತ್ಯವ ಜೀವಿತಪ್ರಶ್ನೆಗನ್ವಯಿಪ |

ಪದ್ಧತಿಯೆ ಧರ್ಮವೆಲೊ - ಮಂಕುತಿಮ್ಮ ||


546

ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ |

ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ |

ಧೀಯಂ ಪ್ರಚೋದಿಸೆಂದನುದಿನದಿ ಬೇಡಿದರು |

ಶ್ರೇಯಸ್ಸು ಧೀಮಹಿಮೆ - ಮಂಕುತಿಮ್ಮ ||


547

ಮತಿ ನಯನದಂತೆ ಮುಂದಿರ್ಪುದನು ನೋಡುವುದು |

ಮಿತವದರ ಕೆಲಸ, ಹೆಳವನ ಚಲನೆಯಂತೆ ||

ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ |

ಮತಿಬಿಟ್ಟ ಮನ ಕುರುಡು - ಮಂಕುತಿಮ್ಮ ||


548

ಪುರುಷಬುದ್ಧಿಯೆ ಸಾಕು ವರಸಿದ್ಧಿಗೆಂದಲ್ಲ |

ಪರಮೇಶಕರುಣೆಯನವಶ್ಯವೆಂದಲ್ಲ ||

ಚರಣ ನಡೆವನಿತು ಕಣ್ಣರಿವನಿತು ದೂರ ನೀಂ |

ಚರಿಸದಿರೆ ಲೋಪವಲ? - ಮಂಕುತಿಮ್ಮ ||


549

ವಿಧಿಗೆ ನೀಂ ಕಾರ್ಯನಕ್ಷೆಯ ವಿಧಿಸ ಹೊರಡದಿರು |

ಅಧಿಕಾರಿ ನೀನಲ್ಲ; ವಿಧಿ ಬೆಪ್ಪನಲ್ಲ ||

ಹದವರಿತು ವಿಧಿ ತಾನೆ ಕುದುರಿಸುವನೆಲ್ಲವನು |

ಅದಟದಿರು ನೀನವನ - ಮಂಕುತಿಮ್ಮ ||


550

ತಾಳಿ ಮೆಲುಮೆಲನೊಮ್ಮೆ ಧಾಳಿ ರಭಸದಿನೊಮ್ಮೆ |

ಹೇಳದೆಯೆ ಕೇಳದೆಯೆ ಬಹನು ವಿಧಿರಾಯ ||

ಕೀಳ ಮೇಲಾಗಿಪನು ಮೇಲ ಕೀಳಾಗಿಪನು |

ತಾಳುಮೆಯಿನಿರು ನೀನು - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post