Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 251-300

 251

ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು |

ಬಿಳಲೂರೆಗಳ ಲೆಕ್ಕಕಿಲ್ಲ ಕೊನೆ ಮೊದಲು ||

ಬೆಳೆವುದೀ ಪರಿಯರಳಿಮರದಂತೆ ನರಕೋಟಿ |

ನಲಿವನದರಲಿ ಬೊಮ್ಮ - ಮಂಕುತಿಮ್ಮ ||


252

ಒಂದು ಕೊಂಬೆಯು ಬಾಡಲಿನ್ನೊಂದು ಚಿಗುರುವುದು |

ಸಂದಿಹುದು ಚಿರನವತೆಯಶ್ವತ್ಥಮರಕೆ ||

ಎಂದೆಂದುಮಂತಿರುವುದೀ ವಿಶ್ವವೃಕ್ಷವದ |

ರೊಂದು ರೆಂಬೆಯೊ ನೀನು - ಮಂಕುತಿಮ್ಮ ||


253

ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು |

ಚೆಂದಳಿರು ದಿನದಿನಮುಮೊಗೆಯೆ ನೀರೆರೆದು ||

ಸಂದ ಬಲದಿಂದ ಜಗದಶ್ವತ್ಥ ಸೇವೆಯಲಿ |

ನಿಂದಿರುವುದಲೆ ಧರ್ಮ - ಮಂಕುತಿಮ್ಮ ||


254

ನಾಟಕವ ನೋಡು ಬ್ರಹ್ಮಾಂಡರಂಗಸ್ಥಲದಿ |

ಕೋಟಿ ನಟರಾಂತಿಹರು ಚಿತ್ರಪಾತ್ರಗಳ ||

ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ |

ನೋಟಕರು ಮಾಟಕರೆ - ಮಂಕುತಿಮ್ಮ ||


255

ನಾಟಕದೊಳನುವಿಂದ ಬೆರೆತದನು ಮೆಚ್ಚೆನಿಸಿ |

ನೋಟಕನುಮಾಗಿ ತಾಂ ನಲಿದು ನಲಿಯಿಸುವಾ ||

ಪಾಠವನು ಕಲಿತವನೆ ಬಾಳನಾಳುವ ಯೋಗಿ |

ಆಟಕಂ ನಯವುಂಟು - ಮಂಕುತಿಮ್ಮ ||


256

ಪರದ ಮೇಲ್ಕಣ್ಣಿಟ್ಟು ಧರೆಯ ತುಚ್ಛವೆನುತ್ತ |

ತೊರೆದಾಯಸಂಗೊಳ್ಳೆ ದೊರೆವ ಫಲವೇನು? ||

ಸುರಧನುವಿಗೇಣಿಯಿಡಹೊರಟು ನಿನ್ನಂಗಳದ |

ಕಿರಿಹೂವ ಮರೆಯುವೆಯ - ಮಂಕುತಿಮ್ಮ ||


257

ಪರಕಿಹವೆ ಸೋಪಾನವೆಂದು ನೀನೊಪ್ಪುವೊಡೆ |

ಪರಕಿಂತಲಿಹವೆಂತು ಜೊಳ್ಳದಾದೀತು? ||

ಹೊರಲೆಬೇಕಂತಾದೊಡಿಹದ ಹೊರೆಗಳನೆಲ್ಲ |

ಜರೆವುದೇಕಿನ್ನದನು? - ಮಂಕುತಿಮ್ಮ ||


258

ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು |

ಉಲ್ಲಾಸಕೆಡೆಮಾಡು ನಿನ್ನಿನಾದನಿತು ||

ನಿಲ್ಲು ಕೆಚ್ಚದೆಯಿಂದಲನ್ಯಾಯಗಳನಳಿಸೆ |

ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ||


259

ಕಡಲ ಕಡೆದರು ಸುರಾಸುರರು ನಿಜಬಲದಿಂದ |

ಕುಡಿದನದನು ತಪಸ್ಸಿನಿಂದ ಕುಂಭಜನು ||

ಕಡಮೆಜನ ಪಾರಗಾಂಬರೆ ಗಾಸಿಯನು ಪಡದೆ? |

ಪೊಡವಿ ಬಾಳ್ವೆಯುಮಂತು - ಮಂಕುತಿಮ್ಮ ||


260

ದ್ರಾಕ್ಷಿರಸವೇನಲ್ಲ ಜೀವನದ ತಿರುಳಾರ್ಗಮ್ |

ಇಕ್ಷುದಂಡದವೊಲದು ಕಷ್ಟಭೋಜನವೆ ||

ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ |

ಮಾಕ್ಷಿಕರು ಮಿಕ್ಕೆಲ್ಲ - ಮಂಕುತಿಮ್ಮ ||


261

ಆಟವೋ ಮಾಟವೋ ಕಾಟವೋ ಲೋಕವಿದು |

ಊಟ ಉಪಚಾರಗಳ ಬೇಡವೆನ್ನದಿರು ||

ಪಾಟವವು ಮೈಗಿರಲಿ, ನೋಟ ತತ್ತ್ವದೊಳಿರಲಿ |

ಪಾಠಿಸು ಸಮನ್ವಯವ - ಮಂಕುತಿಮ್ಮ ||


262

ಒಂದು ಕಣ್ಣಳುವಂದು ಮತ್ತೊಂದು ತಳ್ಕೈಸಿ |

ಅಂದ ಚೆಂದಗಳ ಜನವರಸುವುದು ಬಾಳೊಳ್ ||

ಬಂಧುಮೋಹವೊ ಯಶವೊ ವೈರವೊ ವೈಭವವೊ |

ಬಂಧಿಪುದು ಜಗಕವರ - ಮಂಕುತಿಮ್ಮ ||


263

ಬಾಳು ಪಾಳೆನ್ನುವರ ಬಿಟ್ಟಿಹುದೆ ಬೆದಕಾಟ? |

ತಾಳಿದರೆ ಬಾಳನಂತಹರುಮ್ ಆಶೆಯಲಿ? ||

ಕಾಲವಿನ್ನಿರದಿಂತು ನಾಳೆ ನೋಡುವಮೆನುತ |

ಮೇಲನೆ ನಿರೀಕ್ಷಿಪರು - ಮಂಕುತಿಮ್ಮ ||


264

ಗೋಳಾಡಲುಂ ಬೇಡ, ಲೋಲಾಪ್ತಿಯುಂ ಬೇಡ |

ಬಾಳು ಪರಚೇತನದ ಕೇಳಿಯೆಂದೆಣಿಸಿ ||

ಪಾಲಿಗನು ನೀನದರೊಳೆನಿಪಂತೆ ಬಾಳುತಿರು |

ಕೇಳಿಯುಂ ಧರ್ಮವೆಲೊ - ಮಂಕುತಿಮ್ಮ ||


265

ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು |

ಕೀಳದೆನಿಪವನೊರಟ, ಮಂಕ, ಕಲ್ಲೆದೆಗ ||

ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದಿರವ |

ಮೇಲೆನಿಪವನೆ ರಸಿಕ - ಮಂಕುತಿಮ್ಮ ||


266

ಬಾಳ ಹಳಿವುದದೇಕೆ? ಗೋಳ ಕರೆವುದದೇಕೆ? |

ಬಾಳಿದಲ್ಲದೆ ತಪ್ಪದೇನ ಮಾಡಿದೊಡಂ ||

ಕೇಳಿಯದು ಬೊಮ್ಮನಾಡಿಪನು ನೀನದರೊಳಗೆ |

ಪಾಲುಗೊಳಲಳಬೇಡ - ಮಂಕುತಿಮ್ಮ ||


267

ಲೀಲೆಯೇಂ ಬಾಳೆಲ್ಲ? ಛೀ ತಳ್ಳು ಹಾಸ್ಯವನು |

ಬಾಲರೇಂ ನಾವಿನ್ನುಮೆನುತ ಪಲ್ಕಡಿದು ||

ಖೇಲನವ ಬೇಡವೆನುವರನು ವಿಧಿರಾಯನವ--- |

ಹೇಳಿಪನು ಸೆರೆವಿಡಿದು - ಮಂಕುತಿಮ್ಮ ||


268

ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು? |

ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ ||

ಬಾಚಿಕೊಳಲಮೃತಕಣಗಳನ್ನೆಲ್ಲ ತನ್ನೆಡೆಗೆ |

ಸಾಜ ಸೊಗವಾತ್ಮಂಗೆ - ಮಂಕುತಿಮ್ಮ ||


269

ಸುಂದರವನೆಸಗು ಜೀವನದ ಸಾಹಸದಿಂದೆ |

ಕುಂದಿಲ್ಲವದಕೆ ಸಾಹಸಭಂಗದಿಂದೆ ||

ಮುಂದಕದು ಸಾಗುವುದು ಮರಳಿ ಸಾಹಸದಿಂದೆ |

ಚೆಂದ ಧೀರೋದ್ಯಮವೆ - ಮಂಕುತಿಮ್ಮ ||


270

ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ |

ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ ||

ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- |

ವಲ್ಲಗಳೆಯದಿರವನು - ಮಂಕುತಿಮ್ಮ ||


271

ವ್ಯರ್ಥವೀ ಜೀವನದ ಬಡಿದಾಟವೆನ್ನದಿರು |

ಅರ್ಥವಹುದದು ನಿನಗೆ ಪೂರ್ಣದರ್ಶನದಿಂ ||

ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ |

ಪೂರ್ತಿಯಿದನರಿಯೆ ಸೊಗ - ಮಂಕುತಿಮ್ಮ ||


272

ಬೊಮ್ಮನೇ ಸಂಸ್ಕೃತಿಯ ಕಟ್ಟಿಕೊಂಡುತ್ಸಹಿಸೆ |

ಸುಮ್ಮನರೆಚಣವಿರದೆ ಪ್ರಕೃತಿ ತೊಡಗುತಿರೆ ||

ಜನ್ಮ ಸಾಕೆನುವುದೇಂ? ದುಮ್ಮಾನವಡುವುದೇಂ? |

ಚಿಮ್ಮುಲ್ಲಸವ ಧರೆಗೆ - ಮಂಕುತಿಮ್ಮ ||


273

ಕೋಟಿ ದೆಸೆಯುಸಿರುಗಳು, ಕೋಟಿ ರಸದಾವಿಗಳು |

ಕೋಟಿ ಹೃದಯದ ಹೋಹೊ ಹಾಹಕಾರಗಳು ||

ಕೂಟ ಕೂಡಿಹುವಂತರಿಕ್ಷದಲಿ ನೀನದರಿನ್ |

ಓಟವೋಡುವುದೆತ್ತ? - ಮಂಕುತಿಮ್ಮ ||


274

ನಯದಿಂದ ಸೋಕು, ನೀಂ ದಯೆಯಿಂದ ನೋಡದನು |

ಭಯದಿನೋಲಗಿಸು, ನೀಂ ಪೂಜೆಗೈಯದನು ||

ಸ್ವಯಮಂಕುರಿತ ಸಕಲ ವಿಶ್ವಸತ್ತ್ವವೊ; ಜೀವ |

ಪ್ರಿಯತಮವೊ ಸೃಷ್ಟಿಯಲಿ - ಮಂಕುತಿಮ್ಮ ||


275

ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ |

ಜೀವನಪರೀಕ್ಷೆ ಬಂದಿದಿರು ನಿಲುವನಕ ||

ಭಾವಮರ್ಮಂಗಳೇಳುವುವಾಗ ತಳದಿಂದ |

ದೇವರೇ ಗತಿಯಾಗ - ಮಂಕುತಿಮ್ಮ ||


276

ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆ |

ಚೆಲ್ವುರೂಪಿಂ ಬಂದು ಕಣ್ಕುಕ್ಕುವನಕ ||

ವಲ್ಗುರೂಪ ಸುಭದ್ರೆ ಕಣ್ಮುಂದೆ ಸುಳಿವನಕ |

ಫಲ್ಗುಣನು ಸಂನ್ಯಾಸಿ - ಮಂಕುತಿಮ್ಮ ||


277

ಧಾರುಣೀಸುತೆಯವೊಲು ದೃಢಮನಸ್ಕರದಾರು? |

ಮಾರೀಚಹರಿಣವಡ್ಡಾಡಲೇನಾಯ್ತು? ||

ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ |

ಆರದನು ಕೆರಳಿಪರೊ! - ಮಂಕುತಿಮ್ಮ ||


278

ಆನೆಗಾರ್ ಇರುವೆಗಾರ್ ಕಾಗೆಗಾರ್ ಕಪ್ಪೆಗಾರ್ |

ಕಾಣಿಸುವರನ್ನವನು? ಹಸಿವವರ ಗುರುವು ||

ಮಾನವನುಮಂತುದರಶಿಷ್ಯನವನಾ ರಸನೆ |

ನಾನಾವಯವಗಳಲಿ - ಮಂಕುತಿಮ್ಮ ||


279

ಯಮನಿಗೇಕಪಕೀರ್ತಿ? ನರರು ಬಲು ಕರುಣಿಗಳೆ? |

ಮಮತೆಯಿನೊ ರೋಷದಿನೊ ಹಾಸ್ಯದಿನೊ ಹೇಗೋ ||

ನಿಮಿಷನಿಮಿಷಮುಮೊರ್ವನಿನ್ನೊರ್ವನನು ತಿಕ್ಕಿ |

ಸಮೆಯಿಸುವನಾಯುವನು - ಮಂಕುತಿಮ್ಮ ||


280

ದೋಷಿಯವನಿವನು ಪಾಪಿಯೆನುತ್ತ ಗಳಹದಿರು |

ಆಶೆಯೆನಿತವನು ಸಹಿಸಿದನೊ| ದಹಿಸಿದನೊ! ||

ವಾಸನೆಗಳವನನೇನೆಳೆದವೋ ಬಲವೇನೊ! |

ಪಾಶಬದ್ಧನು ನರನು - ಮಂಕುತಿಮ್ಮ ||


281

ಪಾತಕಿಯೊಳಾಗ್ರಹವ ತೋರೆ ನಿರ್ಮಲನಾರು? |

ಆತುಮದ ಪರಿಕಥೆಯನರಿತವರೆ ನಾವು? ||

ಸೋತ ದುರ್ಬಲಿಗೆ ಸಲ್ಲುವುದು ನಮ್ಮನುಕಂಪೆ |

ನೀತಿ ನಿಂದೆಯೊಳಿರದು - ಮಂಕುತಿಮ್ಮ ||


282

ಪಾಪವೆಂಬುದದೇನು ಸುಲಭಸಾಧನೆಯಲ್ಲ |

ತಾಪದಿಂ ಬೇಯದವನ್ ಅದನೆಸಪನಲ್ಲ ||

ವಾಪಿಯಾಳವ ದಡದಿ ನಿಂತಾತನರಿವನೇಂ? |

ಪಾಪಿಯೆದೆಯೊಳಕಿಳಿಯೊ - ಮಂಕುತಿಮ್ಮ ||


283

ರಾವಣನ ಹಳಿವವನೆ, ಜೀವವನೆ ಬಿಸುಡಿಸುವ |

ಲಾವಣ್ಯವೆಂತಹುದೊ? ನೋವದೆಂತಹುದೊ? ||

ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ |

ಗಾವಿಲನ ಗಳಹೇನು? - ಮಂಕುತಿಮ್ಮ ||


284

ಜೀವಋಣಗಳ ಲೆಕ್ಕದಾದಿಯರಿಯದ ನಾವು |

ಆವುದನು ಸರಿಯೆನುವ? ತಪ್ಪಾವುದೆನುವ? ||

ಓವೊ ಬಿಡು ಕಡುಕಷ್ಟ ನೀತಿನಿರ್ಣಯದ ಹೊರೆ |

ದೈವವದ ಹೊರಲಿ ಬಿಡು - ಮಂಕುತಿಮ್ಮ ||


285

ನಾಚಿಕೆಯನಾಗಿಪುವು ನಮ್ಮ ಸುಖದಾತುರದ |

ಯೋಚನೆಗಳವನು ಮರುವಗಲು ಪರಿಕಿಸಲು ||

ಚಾಚಿದ್ದ ರಸನೆ ತಾನೊಳಸೇದಿಕೊಳ್ಳುವುದು |

ರೇಚನವದಾತ್ಮಕ್ಕೆ - ಮಂಕುತಿಮ್ಮ ||


286

ಸನ್ನಿಹಿತ ಮನುಜನಲಿ ದೈವಪಾಶವವೆರಡು |

ಪುಣ್ಯ ಪಾಪದ ಮಿಶ್ರವವನ ಸ್ವಭಾವ ||

ಕಣ್ಣೊಮ್ಮೆಯಾಗಸದ ಬೆಳಕಿನೊಡನಾಡುವುದು |

ಮಣ್ಣೊಳುರುಳುವುದೊಮ್ಮೆ - ಮಂಕುತಿಮ್ಮ ||


287

ನರರ ಸ್ವಭಾವ ವಕ್ರಗಳನೆಣಿಸುವುದೇಕೆ? |

ಗಿರಿ ಕಣಿವೆಗಳ ಗಣಿಸಿ ರೋಷಗೊಳ್ಳುವೆಯೇಂ? ||

ಸುರೆ ಗರಲ ಸುಧೆಗಳ್ ಅಬ್ಧಿಯಲಿ ಸೋದರರಲ್ತೆ |

ಅರಿತೊಗ್ಗು ಸಾಜಕ್ಕೆ - ಮಂಕುತಿಮ್ಮ ||


288

ರಾಮನಿರ್ದಂದು ರಾವಣನೊಬ್ಬನಿರ್ದನಲ |

ಭೀಮನಿರ್ದಂದು ದುಶ್ಯಾಸನನದೊರ್ವನ್ ||

ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು? |

ರಾಮಭಟನಾಗು ನೀಂ - ಮಂಕುತಿಮ್ಮ ||


289

ಆಳನೀಳಗಳ ಕಾಣಲ್ಕಾಗಿಸದೆ ಮೊರೆವ |

ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು ||

ಪೇಳುವರದಾರು ನ್ಯಾಯಾನ್ಯಾಯ ವಿವರಗಳ |

ಗಾಳಿಗಾಬರಿಯೆಲ್ಲ - ಮಂಕುತಿಮ್ಮ ||


290

ಸಕ್ಕರೆಯ ಭಕ್ಷ್ಯವನು ಮಕ್ಕಳೆದುರಿಗೆ ಕೈಗೆ |

ಸಿಕ್ಕುವಂತಿರಿಸಿ ಕದ್ದರೆ ಗದ್ದರಿಪುದೇಂ? ||

ತಕ್ಕುದಲ್ಲದಪೇಕ್ಷೆಗೇಕೆ ಮದ್ಯವ ಕುಡಿಸು- |

ತುಕ್ಕಿಸುವನದನು ವಿಧಿ? - ಮಂಕುತಿಮ್ಮ ||


291

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ |

ಕೈಸೋಕದಿರೆ ಕೈಯ ಸಪ್ಪುಳಾದೀತೆ? ||

ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ |

ದೋಷವೊಳಗೋ ಹೊರಗೊ? - ಮಂಕುತಿಮ್ಮ ||


292

ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ |

ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು ||

ಉದ್ದ ನೀಂ ಬೆರಳನಿತು ಬೆಳೆದೀಯೆ ಸಾಮಿಂದೆ |

ಸ್ಪರ್ಧಿಯೆ ತ್ರಿವಿಕ್ರಮಗೆ? - ಮಂಕುತಿಮ್ಮ ||


293

ದರಿಯಿರದೆ ಗಿರಿಯಿಲ್ಲ, ನೆರಳಿರದೆ ಬೆಳಕಿಲ್ಲ |

ಮರಣವಿಲ್ಲದೆ ಜನನಜೀವನಗಳಿಲ್ಲ ||

ವರಗುಣೋನ್ನತಿಗೆ ನಿಮ್ನಗುಣಂಗಳೊಡವುಟ್ಟು |

ತೆರೆ ಬೀಳದೇಳುವುದೇ - ಮಂಕುತಿಮ್ಮ ||


294

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು |

ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ ||

ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ |

ಯಿಪ್ಪತ್ತು ಸೇರೆ ರುಚಿ - ಮಂಕುತಿಮ್ಮ ||


295

ತಪ್ಪನಿನಿತುಂ ಸೈಸದಪ್ಪಟದ ಗುಣಶಾಲಿ |

ಕಪ್ಪು ಕಂಡು ಕನಲ್ವ ಕೆಂಡ ಗುಲಗಂಜಿ ||

ಉಪ್ಪೊ ಸಪ್ಪೆಯೊ ನಿನ್ನ ಮೈಬೆವರು ನೆಕ್ಕಿ ತಿಳಿ |

ಒಪ್ಪಿಹೆಯ ನೀನಜನ? - ಮಂಕುತಿಮ್ಮ ||


296

ಮರುಕದುಂಬಿದ ಕಣ್ಣನೋಟದೊಳಗಿದ್ದೀತು |

ಬಿರುನುಡಿಯೊಳಿರದೊಂದು ಕೂರಲಗು, ಸಖನೆ ||

ಕರವಾಳಕದಿರದಿಹ ದುರಿತಕಾರಿಯ ಹೃದಯ |

ಕರುಣೆಯಿಂ ಕರಗೀತೊ - ಮಂಕುತಿಮ್ಮ ||


297

ಪೆರ್ಮೆಯ ಗುಣಂಗಳಿನ್ನೂರು ಶಾಸ್ತ್ರೋಕ್ತದವು |

ಸರ್ವೋತ್ತಮಗಳೆರಡು ಸರ್ವಕಠಿನಗಳು ||

ನಿರ್ಮತ್ಸರತೆಯೊಂದು ದೋಷಿಯೊಳ್ ಕ್ಷಮೆಯೊಂದು |

ಬಾಹ್ಮಿಕಾಭ್ಯಾಸವದು - ಮಂಕುತಿಮ್ಮ ||


298

ಗಾರೆಗಚ್ಚೇನಲ್ಲ ದಾರು ದೂಲಗಳಲ್ಲ |

ಪಾರದ ದ್ರವದವೊಲು ಮನುಜಸ್ವಭಾವ ||

ವೀರಶಪಥಗಳಿಂದೆ ಘನರೂಪಿಯಾಗದದು |

ಸೈರಿಸದನಿನಿತು ನೀಂ - ಮಂಕುತಿಮ್ಮ ||


299

ಹಟವಾದಕೆಡೆಯೆಲ್ಲಿ ಮನುಜಪ್ರಪಂಚದಲಿ? |

ಸೆಟೆಯೆಷ್ಟೊ ದಿಟವೆಷ್ಟೊ ಬೆರೆತಿರುವುವಿಲ್ಲಿ ||

ಪಟುವಾಗಿ ನಿಲಲಹುದೆ ಮಣಲೊಳೆಸಗಿದ ಗೋಡೆ? |

ಕಟುತೆ ಸಲ್ಲದು ಜಗಕೆ - ಮಂಕುತಿಮ್ಮ ||


300

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ |

ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||

ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ |

ಬಿಡಿಗಾಸು ಹೂವಳಗೆ - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post