Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 401-450

 401

ಮರಣಶಯ್ಯೆಯದೆಂದು ತಿಳಿದೊಡಂ ರೋಗಿಯನು |

ಹರಣಮಿರುವನ್ನೆಗಂ ಪರಿಚರಿಸುವಂತೆ ||

ಸ್ಥಿರವಲ್ಲವೀ ಲೋಕವಾದೊಡಮದುಳ್ಳನಕ |

ಚರಿಸು ನೀನಾಳಾಗಿ - ಮಂಕುತಿಮ್ಮ ||


402

ಜವನ ನಿಂದಿಪುದೇಕೆ ಸರ್ವಘಾತಕನೆಂದು? |

ಭುವಿಗೆ ವೃದ್ಧಸಮೃದ್ಧಿಯವನು ಸುಮ್ಮನಿರಲ್ ||

ನವಜನಕ್ಕೆಡೆಯೆತ್ತಲಾರುಮೆಡೆಬಿಡದೆ ನಿಲೆ? |

ನವತೆಯವನಿಂ ಜಗಕೆ - ಮಂಕುತಿಮ್ಮ ||


403

ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ |

ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ||

ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ |

ಉಳಿವಿಗಳಿವಿನ ನೆರೆಯೊ - ಮಂಕುತಿಮ್ಮ ||


404

ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ |

ಜಾವ ದಿನ ಬಂದು ಪೋಗುವುವು; ಕಾಲ ಚಿರ ||

ಜೀವದ ವ್ಯಕ್ತಿ ಸಾಯ್ವುದು; ಜೀವಸತ್ತ್ವ ಚಿರ |

ಭಾವಿಸಾ ಕೇವಲವ - ಮಂಕುತಿಮ್ಮ ||


405

ಪರಬೊಮ್ಮ ಜೀವಭೇದದಿ ನಿಜೈಕ್ಯವ ಮರೆಯೆ |

ಮರಳಿ ತನ್ನೊಟ್ಟನವನರಸಲೆಚ್ಚರಿಸಲ್ ||

ನರನಾರಿಯರ ಪರಸ್ಪರ ಮೋಹದಲಿ ಮಾಯೆ |

ನಿರವಿಸಿಹಳಂಕುಶವ - ಮಂಕುತಿಮ್ಮ ||


406

ನರನಾರಿಮೋಹದಿಂ ವಂಶವದಕಾಗಿ ಮನೆ |

ನೆರೆ ಹೊರೆಗಳೂರು ರಾಷ್ಟ್ರಗಳು ಸಂಘಗಳು ||

ಕೆರೆಯೊಂದು ಕೇಂದ್ರದಿಂದಲೆಯ ಬಳೆಗಳು ನೂರು |

ಹರಿವಂತೆ ಸಂಸಾರ - ಮಂಕುತಿಮ್ಮ ||


407

ಅದರಿಂದ ನೀತಿ ನಯವದರಿಂದ ಕುಲಗೋತ್ರ |

ವದರಿಂದ ರಾಜ್ಯ ಮಠ ಧರ್ಮ ಸಂಸ್ಥೆಗಳು ||

ಒದವುವದರಿಂದೆ ಮಮತಾನಾಶದವಕಾಶ- |

ವದರಿನಾತ್ಮವಿಕಾಸ - ಮಂಕುತಿಮ್ಮ ||


408

ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಗೆ |

ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ ||

ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ |

ನಿಲದಮೃತಧಾರೆಯದು - ಮಂಕುತಿಮ್ಮ ||


409

ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ |

ಕಾಣಿಪುದದಾತ್ಮ ಸ್ವಭಾವದುದ್ಗಮವ ||

ಏನಾಶೆ! ಯೇನು ಸಾಹಸ! ವೇನು ಭಂಗಗಳು! |

ಅನುಭವವೇದವದು - ಮಂಕುತಿಮ್ಮ ||


410

ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು |

ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ||

ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ |

ಮಾನವತೆ ನಿಂತಿಹುದು - ಮಂಕುತಿಮ್ಮ ||


411

ತೆರಪನರಿಯದೆ ಪರಿವ ಕಾಲಪ್ರವಾಹದಲಿ |

ಪುರುಷರಚಿತಗಳೆನಿತೊ ತೇಲಿಹೋಗಿಹವು ||

ಪುರ ರಾಷ್ಟ್ರ ದುರ್ಗಗಳು, ಮತ ನೀತಿ ಯುಕ್ತಿಗಳು |

ಪುರುಷತನ ನಿಂತಿಹುದು - ಮಂಕುತಿಮ್ಮ ||


412

ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ |

ಗುಣವ ಕೊಳ್ಳುತ ಕೊಡುತ ಪೊನಲು ಮಾರ್ಪಡುಗುಂ ||

ಮನುಜಸಂತಾನದಲಿ ಗುಣದವತರಣವಂತು |

ಗುಣಿಪುದೆಂತಾ ತೆರನ - ಮಂಕುತಿಮ್ಮ ||


413

ಬರಿಯ ಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ |

ಬೆರಕೆಯೆಲ್ಲರುಮರ್ಧನಾರೀಶನಂತೆ ||

ನರತೆಯಣು ನಾರಿಯಲಿ ನಾರೀತ್ವ ನರನೊಳಣು |

ತಿರಿಚುತಿರುವುದು ಮನವ - ಮಂಕುತಿಮ್ಮ ||


414

ಅಳೆವರಾರ್ ಪೆಣ್ಗಂಡುಗಳನೆಳೆವ ನೂಲುಗಳ? |

ಕೆಳೆಪಗೆಗಳೆಲ್ಲವಾಳದಲಿ ಬಲು ತೊಡಕು ||

ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ |

ತಿಳಿಯಗೊಡನದ ನಮಗೆ - ಮಂಕುತಿಮ್ಮ ||


415

ಎಲ್ಲಿಯದನೋ ಅದೆಲ್ಲಿಯದಕೋ ಹೆಣೆಯುವನು |

ಒಲ್ಲೆವೆನೆ ನೀವೆ ಕಿತ್ತಾಡಿಕೊಳಿರೆನುವನ್ ||

ಬೆಲ್ಲದಡುಗೆಯಲಿ ಹಿಡಿ ಮರಳನೆರಚಿರಿಸುವನು |

ಒಳ್ಳೆಯುಪಕಾರಿ ವಿಧಿ - ಮಂಕುತಿಮ್ಮ ||


416

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯ್ತೆ? |

ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ||

ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ? |

ಮೃಷೆಯೊ ಮೈಬೆಡಗೆಲ್ಲ - ಮಂಕುತಿಮ್ಮ ||


417

ಹೇಮಕುಂಭದಿ ಕೊಳಚೆರೊಚ್ಚುನೀರ್ಗಳ ತುಂಬಿ |

ರಾಮಣೀಯಕದೊಳಿಟ್ಟಾಮಗಂಧವನು ||

ಪ್ರೇಮಪುಷ್ಪಕೆ ಮೊನಚು ಗರಗಸವನಂಚಿರಿಸಿ |

ಏಂ ಮಾಡಿದನೊ ಬೊಮ್ಮ! - ಮಂಕುತಿಮ್ಮ ||


418

ಕೈಕೇಯಿ ಸತ್ಯಭಾಮೆಯರಂಶವಿರದ ಪೆಣ್ |

ಲೋಕದೊಳಗಿರಳು; ಬೆಳೆವುದು ಲೋಕವವರಿಂ ||

ಸಾಕಿ ಸಲಹುವ ಮತ್ಸರವದು ಸೃಷ್ಟಿಯುಪಾಯ |

ಬೇಕದಕೆ ನಗು ಸಹನೆ - ಮಂಕುತಿಮ್ಮ ||


419

ಎಳೆಯ ತರು ದಿನದಿನವು ಹೊಸತಳಿರ ತಳೆವಂತೆ |

ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ ||

ಎಳೆ ಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು |

ಇಳೆಯೊಳಗೊಂದು ಸೊಗ - ಮಂಕುತಿಮ್ಮ ||


420

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ |

ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ ||

ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ? |

ದಿಕ್ಕವರಿಗವರವರೆ - ಮಂಕುತಿಮ್ಮ ||


421

ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ |

ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ||

ಕ್ಷಣಮಾತ್ರ ಮಾನುಮದು ಕಣ್ಣೀರ ಬರಿಸುವುದು |

ಗಣಿಸಬೇಡದನು ನೀಂ - ಮಂಕುತಿಮ್ಮ ||


422

ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ |

ಮನದಿ ತೆರೆಗಳ ಕುಲುಕಿ ಕಡೆಯುವುದುಮೊಳಿತು ||

ಘನ ವರ್ಷ ಬಿರುಗಾಳಿ ಬಡಿಯಲಿರುಳೊಳ್ ನೆಲನ |

ದಿನದ ಸೊಗಸಿಮ್ಮಡಿಯೊ - ಮಂಕುತಿಮ್ಮ ||


423

ಭಾವರಾಗೋದ್ರೇಕ ತಾನೆ ತಪ್ಪೇನಲ್ಲ |

ಧೀವಿವೇಕದ ಸಮತೆಯದರಿನದಿರದಿರೆ ||

ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ |

ಪಾವನವೊ ಹೃನ್ಮಥನ - ಮಂಕುತಿಮ್ಮ ||


424

ಕಾರಿರುಳೊಳಾಗಸದಿ ತಾರೆ ನೂರಿದ್ದೇನು? |

ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ||

ದೂರದಾ ದೈವವಂತಿರಲಿ, ಮಾನುಷಸಖನ |

ಕೋರುವುದು ಬಡಜೀವ - ಮಂಕುತಿಮ್ಮ ||


425

ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ |

ಮರುನುಡಿಯ ನುಡಿವನೇನ್ ಒಡಲ ತೋರದನು? ||

ಪರಿತಪಿಸುವುದು ಜೀವ ಜೀವಸರಸವನೆಳಸಿ |

ನರಧರ್ಮಸೂಕ್ಷ್ಮವಿದು - ಮಂಕುತಿಮ್ಮ ||


426

ಮನುಜರೂಪದಿನಾದರವನು ಪಡೆಯದ ಹೃದಯ- |

ವನುರಾಗವನು ಬಿಡಾಲಕೊ ಶುಕಕೊ ಕಪಿಗೋ ||

ಶುನಕಕೋ ಸುರಿದದರ ಮಾರ್ದನಿಯನಾಲಿಪುದು |

ತಣಿವು ಜೀವಸ್ವರದೆ - ಮಂಕುತಿಮ್ಮ ||


427

ಮಾತೆವೊಲೊ ಪಿತನವೊಲೊ ಪತಿಯವೊಲೊ ಸತಿಯವೊಲೊ |

ಭ್ರಾತಸುತಸಖರವೊಲೊ ಪಾತ್ರವೊಂದಕೆ ತಾಂ ||

ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ |

ಪ್ರೀತಿಯಾ ಹುಚ್ಚು ಚಟ - ಮಂಕುತಿಮ್ಮ ||


428

ಪ್ರೇಮ ಕನಲೆ ಪಿಶಾಚಿ, ತೃಪ್ತಿಯಾಂತಿರೆ ಲಕ್ಷ್ಮಿ |

ಭ್ರಾಮಿಪುದದು ಪ್ರತಿಪ್ರೇಮಯಾಚನೆಯೊಳ್ ||

ಮಾಮಕವಿದೆಂದಾವುದಕೊ ತಾನೆ ಬಲಿವೋಗಿ |

ಶಾಮನವನೊಂದುವುದು - ಮಂಕುತಿಮ್ಮ ||


429

ಬಂಧನವದೇನಲ್ಲ ಜೀವಜೀವಪ್ರೇಮ |

ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ ||

ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ |

ಬಾಂಧವ್ಯ ದೈವಕೃಪೆ - ಮಂಕುತಿಮ್ಮ ||


430

ಒಬ್ಬನುಣುವೂಟದಲಿ ಸವಿಯಿಲ್ಲ ಸೊಗವಿಲ್ಲ |

ಇಬ್ಬರಾಗುವೆನೆಂದನಂತೆ ಪರಬೊಮ್ಮಂ ||

ಹೆಬ್ಬದುಕನೊಂಟಿತನದೊಳದೇನು ಬದುಕುವೆಯೊ? |

ತಬ್ಬಿಕೊಳೊ ವಿಶ್ವವನು - ಮಂಕುತಿಮ್ಮ ||


431

ಕೊಳದಿ ನೀಂ ಮೀವಂದು ತೆರೆಯೆದ್ದು ಹರಡುತ್ತೆ |

ವಲಯವಲಯಗಳಾಗಿ ಸಾರುವುದು ದಡಕೆ ||

ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು |

ಕಲೆತುಕೊಳ್ಳಲಿ ಜಗದಿ - ಮಂಕುತಿಮ್ಮ ||


432

ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು |

ಆತ್ಮವಿಸ್ತಾರವಾಗಿಪುದೆ ನಿತ್ಯಸುಖ ||

ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ |

ಒಟ್ಟು ಬಾಳ್ವುದ ಕಲಿಯೊ - ಮಂಕುತಿಮ್ಮ ||


433

ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ |

ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? ||

ಒಳಜಗವ ಹೊರವಡಿಪ, ಹೊರಜಗವನೊಳಕೊಳುವ |

ಸುಳುದಾರಿಯಳುನಗುವು - ಮಂಕುತಿಮ್ಮ ||


434

ನಗುವೊಂದು ರಸಪಾಕವಳುವೊಂದು ರಸಪಾಕ |

ನಗುವಾತ್ಮ ಪರಿಮಳವ ಪಸರಿಸುವ ಕುಸುಮ ||

ದುಗುಡವಾತ್ಮವ ಕಡೆದು ಸತ್ತ್ವವೆತ್ತುವಮಂತು |

ಬಗೆದೆರಡನುಂ ಭುಜಿಸು - ಮಂಕುತಿಮ್ಮ ||


435

ರಾಮಣೀಯಕದಿ ನಲಿವಕ್ಷಿಯೊಡನಚಲಮನ |

ಪ್ರೇಮಮಯಮನದೊಡನೆ ಮೋಹಬಡದಾತ್ಮ ||

ಭೀಮಬಲದೊಡನೆ ರಾಮನ ಅಭಯ ನಿಯಮವಿರೆ |

ಯಾಮಳ ವರಂಗಳವು - ಮಂಕುತಿಮ್ಮ ||


436

ಎದೆ ಮಾರುವೋಗದೊಡೆ, ಕಣ್ ಸೊಬಗನುಂಡರೇಂ? |

ಹೃದಯ ಮುಯ್ ಕೇಳದೊಡೆ, ನಲವ ಸೂಸಿದರೇಂ? ||

ಕದಡದಿರ್ದೊಡೆ ಮನವ, ತನು ಸೊಗವ ಸವಿದೊಡೇಂ? |

ಮುದ ತಾನೆ ತಪ್ಪಲ್ಲ - ಮಂಕುತಿಮ್ಮ ||


437

ಶಕ್ತಿ ಕರಣಕ್ಕಿರಲಿ, ರಸ ಸಂಗ್ರಹಣ ಶಕ್ತಿ |

ಯುಕ್ತವದರೊಡನಿರಲಿ ಭೋಗದಿ ವಿರಕ್ತಿ ||

ಶಕ್ತಿ ತನ್ನೊಳಗಿದ್ದು ರಕ್ತಮನನಾಗದನೆ |

ಉತ್ತಮೋತ್ತಮ ಸುಕೃತಿ - ಮಂಕುತಿಮ್ಮ ||


438

ತಳಿರ ನಸುಕೆಂಪು, ಬಳುಕೆಲೆಯ ಹಸುರಿನ ಸೊಂಪು |

ತಿಳಿಮನದ ಯುವಜನದ ನಗುಗಣ್ಣ ಹೊಳಪು ||

ಬೆಳೆವರಿವು ಮಗುದುಟಿಯಿನುಣ್ಮಿಸುವ ನುಡಿಚಿಗುರು |

ಇಳೆಯೊಳಿವನೊಲ್ಲನಾರ್? - ಮಂಕುತಿಮ್ಮ ||


439

ಏಳಿಸುವುದೊಂದು ಹೊರಸುಳಿವೆನ್ನ ಹೃದಯದಲಿ |

ಗಾಳಿಸುಂಟರೆಯನದು ಹರಣಗಳ ಕುಲುಕಿ ||

ಬಾಳನಲ್ಲಾಡಿಪುದು ಬೇರಿಂದ ತುದಿವರೆಗೆ |

ಧೂಳದರೊಳೀ ಜನ್ಮ - ಮಂಕುತಿಮ್ಮ ||


440

ಹೊರಗೆ ಹೊಳೆವೊಂದು ಹೊಳಪಿನ ಕಿರಣವೆನ್ನೆದೆಯೊ- |

ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ||

ಕೆರಳಿಪುದು ಕರಣಗಳ, ಮರಳಿಪುದು ಹರಣಗಳ |

ಹೊರಮೋಹವೊಳದಾಹ - ಮಂಕುತಿಮ್ಮ ||


441

ಇಂತು ಹೊರಗೊಳಗುಗಳು ಬೇರೆಲೋಕಗಳಲ್ಲ |

ಅಂತರಂಗದೊಳೂರಸಂತೆ ಸದ್ದಿಹುದು ||

ಸಂತೆಯೊಳಮಂತರಂಗದ ಸದ್ದು ಕೇಳಿಪುದು |

ಸ್ವಾಂತದಿಕ್ಕೆಲಗಳವು - ಮಂಕುತಿಮ್ಮ ||


442

ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ? |

ಮಗುವೆ, ಮುದುಕನೆ, ಪುರಾಣಿಕ ಪುರೋಹಿತರೆ? ||

ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು |

ಮೊಗವ ತಿದ್ದುವರೆಲ್ಲ - ಮಂಕುತಿಮ್ಮ ||


443

ತಿಂಗಳಾರರ ದುಡಿತ ಚೆಂಗುಲಾಬಿಯ ಬೆಳೆತ |

ಕಂಗೊಳಿಪುದದರ ಸಿರಿಯರೆಗಳಿಗೆಯಲರೊಳ್ ||

ಪೊಂಗುವಾನಂದವದನನುಭವಿಸಿದವನ್ ಅಜನ |

ಹಂಗಿಪನೆ ಕೃಪಣತೆಗೆ? - ಮಂಕುತಿಮ್ಮ ||


444

ಬಾಂದಳದ ಬಾಗು, ರವಿಕಿರಣಗಳ ನೀಳ್ಕೋಲು |

ಇಂದುಮಣಿನುಣ್ಪು, ತಾರೆಗಳ ಕಣ್ಮಿನುಗು ||

ಚೆಂದದಂಗಾಂಗಭಾವದಿ ಮೊದಲ ಪಾಠವಿವು |

ಸೌಂದರ್ಯಗುರು ಪ್ರಕೃತಿ - ಮಂಕುತಿಮ್ಮ ||


445

ಕ್ಷಣವದೊಂದೆ ಅನಂತಕಾಲ ತಾನಾಗುವುದು |

ಅನುಭವಕೆ ಸತ್ತ್ವ ಶಿವ ಸುಂದರಗಳಮರೆ ||

ಮನ ತುಂಬುಶಶಿಯಾಗಿ, ನೆನಪಮೃತವಾಗುವುದು |

ಕ್ಷಣದೊಳಕ್ಷಯ ಕಾಣೊ - ಮಂಕುತಿಮ್ಮ ||


446

ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ- |

ನಂದದೊಳಮರುಮವೇಂ? ವಿಶ್ವಚೇತನದಾ ||

ಸ್ಪಂದನವೆ ಸೌಂದರ್ಯಮದುವೆ ಜೀವನಮೂಲ |

ಬಂಧುರತೆ ಬೊಮ್ಮನದು - ಮಂಕುತಿಮ್ಮ ||


447

ದೃಷ್ಟಿಚುಕ್ಕೆಯದೊಂದನೆಲ್ಲ ಚೆಂದಂಗಳ್ಗ- |

ಮಿಟ್ಟಿಹನು ಪರಮೇಷ್ಠಿ, ಶಶಿಗೆ ಮಶಿಯವೊಲು ||

ಗುಟ್ಟೇನೊ? ರಕ್ಷೆಯೋ? ಸಿಂಗರವೊ? ಹೇಳನವೊ? |

ಮಷ್ಟು ಸೃಷ್ಟಿಗೆ ಬೊಟ್ಟು - ಮಂಕುತಿಮ್ಮ ||


448

ಬಿಂದು ವಿಸರಗಳನುವು, ವಂಕು ಸರಲಗಳನುವು |

ಚೆಂದ ಕಣ್ಣಿಗೆ ವರ್ಣವಿವಿಧಂಗಳನುವು ||

ಚೆಂದ ವೇಗ ಸ್ತಿಮಿತದನುವು, ಹುಳಿಯುಪ್ಪನುವು |

ದ್ವಂದ್ವದನುವುಗಳಂದ - ಮಂಕುತಿಮ್ಮ ||


449

ಸೌಂದರ್ಯದಾಲಯ ಬರಿ ದ್ವಂದ್ವವೇನಲ್ಲ |

ದ್ವಂದ್ವದೊಳಗನುವು; ಅದು ಪರಿಮಾಣದುಚಿತ ||

ಸಂಧಾನರೀತಿಯದು, ಸಹಕಾರ ನೀತಿಯದು |

ಸಂದರ್ಭಸಹಜತೆಯೊ - ಮಂಕುತಿಮ್ಮ ||


450

ಸೌಂದರ್ಯದೊಳ್ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ |

ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ||

ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ |

ಬಂಧಮೋಚನ ನಿನಗೆ - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post