Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 351-400

 351

ಹುದುಗಿಹುದದೆಲ್ಲಿ ಪರಮಾತ್ಮನೀ ತನುವಿನಲಿ? |

ಹೃದಯದೊಳೊ ಮೆದುಳಿನೊಳೊ ಹುಬ್ಬಿನಿರುಕಿನೊಳೋ? ||

ಇದನೆನಿತೊ ತರ್ಕಿಸಿಹರ್; ಎನ್ನೆಣಿಕೆಯನು ಕೇಳು |

ಉದರವಾತ್ಮನಿವಾಸ - ಮಂಕುತಿಮ್ಮ ||


352

ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |

ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||

ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ |

ಇಷ್ಟೆ ನಮ್ಮೆಲ್ಲ ಕಥೆ - ಮಂಕುತಿಮ್ಮ ||


353

ಏನಾದೊಡೇನು? ನೀನೆಲ್ಲಿ ಪೋದೊಡಮೇನು? |

ಪ್ರಾಣವೇಂ ಮಾನವೇನಭ್ಯುದಯವೇನು? ||

ಮಾನವಾತೀತವೊಂದೆಲ್ಲವನು ನುಂಗುವುದು |

ಜಾನಿಸದನಾವಗಂ - ಮಂಕುತಿಮ್ಮ ||


354

ಲೋಕವೆಲ್ಲವು ದೈವಲೀಲೆಯೆಂಬರೆ, ಪೇಳಿ |

ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ||

ಮೂಕಂಗೆ ಕಳ್ ಕುಡಿಸಿ ಚೇಳ್ ಕುಟಕಿಪಾಟವಿದು |

ಏಕಪಕ್ಷದ ಲೀಲೆ - ಮಂಕುತಿಮ್ಮ ||


355

ಗುಣಿಗುಣಿಸಿ ತಿಣಕುತ್ತ ಹೆಣಗಾಡಿ ಫಲವೇನು |

ಗಣನೆಗೆಟುಕದದೊಂದಚಿಂತ್ಯವೆತ್ತಲೊ ತಾನ್ ||

ಅಣಗಿರ್ದು ನಿನ್ನೆಲ್ಲ ಗಣಿತಗಳನಣಕಿಪುದು |

ದಣಿಯದಾ ವಿಧಿ ವಿಕಟ - ಮಂಕುತಿಮ್ಮ ||


356

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು |

ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ ||

ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ |

ಮೋಸದಾಟವೊ ದೈವ - ಮಂಕುತಿಮ್ಮ ||


357

ಧಾತನೆಣ್ಣೆಯಗಾಣದೆಳ್ಳುಕಾಳಲೆ ನೀನು? |

ಆತನೆಲ್ಲರನರೆವನ್; ಆರನುಂ ಬಿಡನು ||

ಆತುರಂಗೊಳದೆ ವಿಸ್ಮೃತಿಬಡದುಪೇಕ್ಷಿಸದೆ |

ಘಾತಿಸುವನೆಲ್ಲರನು - ಮಂಕುತಿಮ್ಮ ||


358

ಇದು ನಡೆಯಲಿಲ್ಲವದು ನಿಂತುಹೋಯಿತೆನುತ್ತ |

ಎದೆಯುಬ್ಬೆಗವನೊಂದಿ ಕುದಿಯುತಿಹುದೇಕೋ? ||

ಅಧಿಕಾರಪಟ್ಟವನು ನಿನಗಾರು ಕಟ್ಟಿಹರು? |

ವಿಧಿಯ ಮೇಸ್ತ್ರಿಯೆ ನೀನು? - ಮಂಕುತಿಮ್ಮ ||


359

ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ |

ಸೃಷ್ಟಿಯಾದಿಯಿನಾಗುತಿಹುದು; ಫಲವೇನು? ||

ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು |

ಮಟ್ಟಸವೆ ತಿರೆಹರವು? - ಮಂಕುತಿಮ್ಮ ||


360

ಇನ್ನೇನು ಮತ್ತೇನು ಗತಿಯೆಂದು ಬೆದರದಿರು |

ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ? ||

ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು |

ತಣ್ಣಗಿರಿಸಾತ್ಮವನು - ಮಂಕುತಿಮ್ಮ ||


361

ಎಲ್ಲಿಯೋ ವಿಧಿಯ ಗೂಢದ ಕರ್ಮಶಾಲೆಯಲಿ |

ನಿಲ್ಲದಾಡುತ್ತಿಹುವು ಯಂತ್ರಕೀಲುಗಳು ||

ಎಲ್ಲಾಗುಹೋಗುಗಳುಮಾ ಚಕ್ರಗತಿಯಂತೆ |

ತಲ್ಲಣವು ನಿನಗೇಕೆ? - ಮಂಕುತಿಮ್ಮ ||


362

ಕಾಲನದಿಯಲಿ ನಮ್ಮ ಬಾಳದೋಣಿಯು ಮೆರೆದು |

ತೇಲುತ್ತೆ ಭಯವ ಕಾಣದೆ ಸಾಗುತಿರಲು ||

ಗಾಳಿಯಾವಗಮೊ ಬಂದೆತ್ತಣಿನೊ ಬೀಸುತ್ತ |

ಮೇಲ ಕೀಳಾಗಿಪುದು - ಮಂಕುತಿಮ್ಮ ||


363

ಆತುರತೆಯೇನಿರದು ವಿಧಿಯಂತ್ರಚಲನೆಯಲಿ |

ಭೀತತೆಯುಮಿರದು, ವಿಸ್ಮೃತಿಯುಮಿರದೆಂದುಂ ||

ಸಾಧಿಪುದದೆಲ್ಲವನು ನಿಲದೆ, ತಪ್ಪದೆ, ಬಿಡದೆ |

ಕಾತರತೆ ನಿನಗೇಕೆ? - ಮಂಕುತಿಮ್ಮ ||


364

ನಟಿಪುದೊಮ್ಮೊಮ್ಮೆ ಮರುಕವ ದೈವ ಮನುಜರಲಿ |

ಕಟುಕನಿನಿಸಕ್ಕಿಯನು ಹಕ್ಕಿಗೆರಚುವವೋಲ್ ||

ತುಟಿ ಸುಟ್ಟು ರಸನೆಗೆಟುಕದ ಕೀರು ದೈವಕೃಪೆ |

ತಟವಟವೊ ಸೃಷ್ಟಿದಯೆ - ಮಂಕುತಿಮ್ಮ ||


365

ಅದು ಒಳಿತು ಇದು ಕೆಟ್ಟುದೆಂಬ ಹಟ ನಿನಗೇಕೆ? |

ಹೊದಿಸಿಹುದು ದೈವವೆಲ್ಲಕಮೊಂದು ತೆರೆಯ ||

ಸೊದೆಯ ಸೌರಭ ನಂಜುಬಟ್ಟಲಲಿ ತೋರೀತು |

ವಿಧಿಯ ಬಗೆಯೆಂತಿಹುದೊ! - ಮಂಕುತಿಮ್ಮ ||


366

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? |

ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ ||

ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ |

ಸಹನೆ ವಜ್ರದ ಕವಚ - ಮಂಕುತಿಮ್ಮ ||


367

ಧಾರಿಣಿಯ ವಾಸಿಗಳ್ಗಿಹುದೊಂದು ಹಿತವಾರ್ತೆ |

ಆರಯ್ವುದಾರ್ತರ್ ಅತ್ಯಾರ್ತರಾಪದವ ||

ರೌರವಿಗೆ ಹಿತ ಮಹಾರೌರವಿಯ ಗೋಳುದನಿ |

ನಾರಕದೊಳದುಪಾಯ - ಮಂಕುತಿಮ್ಮ ||


368

ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ |

ದಿಕ್ಕುಗಾಣದೆ ಜೀವಿಯಲೆವುದಚ್ಚರಿಯೇಂ? ||

ಒಕ್ಕಟ್ಟನೊಡೆಯರೇ ಕಲಿಯದಿರೆ ನಮ್ಮ ಗತಿ- |

ಗಿಕ್ಕಟ್ಟು ತಪ್ಪುವುದೆ? - ಮಂಕುತಿಮ್ಮ ||


369

ಏಕವಾಗವೆ ದೈವಚಿತ್ತ ನರಚಿತ್ತಗಳು? |

ಏಕೆನ್ನ ಮನವನಾಳನು ಲೋಕದೊಡೆಯಂ? ||

ಬೇಕೆನಿಪುದೊಂದೆನಗೆ, ವಿಧಿ ಗೆಯ್ವುದಿನ್ನೊಂದು |

ಈ ಕುಟಿಲಕೇಂ ಮದ್ದು? - ಮಂಕುತಿಮ್ಮ ||


370

ಸ್ವಾತಿ ಮಳೆಹನಿ ಬೀಳ್ವ, ಶುಕ್ತಿ ಬಾಯ್ದೆರೆದೇಳ್ವ |

ಕೌತುಕದ ಸಮಯಯೋಗದೆ ಮೌಕ್ತಿಕ ಫಲ ||

ಪ್ರೀತಿ ಸುಖ ಸತ್ಯದರ್ಶನ ಶಾಂತಿಗಳ ಹುಟ್ಟುಮ್ |

ಆ ತೆರದ ಯೋಗದಿನೆ - ಮಂಕುತಿಮ್ಮ ||


371

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು |

ಬೇಕೆನುತ ಬೊಬ್ಬಿಡುತಲಿಹ ಘಟವನಿದನು ||

ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ |

ಸಾಕೆನಿಪುದೆಂದಿಗೆಲೊ - ಮಂಕುತಿಮ್ಮ ||


372

ವನದಿ ನಿರ್ಜನದಿ ಮೌನದಿ ತಪವನೆಸಗುವನ |

ನೆನಪಿನಲಿ ಪಿಂತಿನನುಭವವುಳಿಯದೇನು? ||

ಇನಿನೋಟ ಸವಿಯೂಟ ಕಿನಿಸು ಕರುಬುಗಳಾಟ |

ಕನಲುತಿಹುವಾಳದಲಿ - ಮಂಕುತಿಮ್ಮ ||


373

ಮನೆಯ ತೊರೆದೋಡಲೇಂ? ವನಗುಹೆಯ ಸಾರಲೇಂ? |

ತನುವನುಗ್ರವ್ರತಗಳಿಂದೆ ದಂಡಿಸಲೇಂ? ||

ಬಿನದಗಲನರಸಿ ನೀನೂರೂರೊಳಲೆದೊಡೇಂ? |

ಮನವ ತೊರೆದಿರಲಹುದೆ - ಮಂಕುತಿಮ್ಮ ||


374

ಈ ಜಗದ ಗಂಧ ಪರಿಪರಿ ಹಸಿವ ಕೆಣಕುತಿರೆ |

ಭೋಜನವ ನೀಡೆನೆನೆ ಮನ ಸುಮ್ಮನಿಹುದೆ? ||

ಸಾಜಗಳ ಕೊಲ್ಲೆನುವ ಹಠಯೋಗಕಿಂತ ಸರಿ |

ರಾಜಯೋಗದುಪಾಯ - ಮಂಕುತಿಮ್ಮ ||


375

ಮನವನಾಳ್ವುದು ಹಟದ ಮಗುವನಾಳುವ ನಯದೆ |

ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ||

ಅನುಕೂಲಿಸದು ಬರಿಯ ಕೂಗು ಬಡಿತಗಳಿನದು |

ಇನಿತಿತ್ತು ಮರಸಿನಿತ - ಮಂಕುತಿಮ್ಮ ||


376

ಅಂತಾನುಮಿಂತಾನುಮೆಂತೊ ನಿನಗಾದಂತೆ |

ಶಾಂತಿಯನೆ ನೀನರಸು ಮನ ಕೆರಳಿದಂದು ||

ಸಂತವಿಡುತೊಮ್ಮೆ ಶಿಕ್ಷಿಸುತೊಮ್ಮೆ ಶಿಶುವೆಂದು |

ಸ್ವಾಂತಮಂ ತಿದ್ದುತಿರು - ಮಂಕುತಿಮ್ಮ ||


377

ಉದರದೈವಕೆ ಜಗದೊಳೆದುರು ದೈವವದೆಲ್ಲಿ? |

ಮೊದಲದರ ಪೂಜೆ; ಮಿಕ್ಕೆಲ್ಲದವರಿಂದ ||

ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ |

ಹದದೊಳಿರಿಸುವುದೆಂತೊ? - ಮಂಕುತಿಮ್ಮ ||


378

ಕುದಿ ಹೆಚ್ಚೆ ವೆಗಟ ಹುದು; ಕಡಮೆಯಿರೆ ಹಸಿನಾತ |

ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ||

ಅದರವೊಲೆ ಮನದ ಹದ, ಅದನೆಚ್ಚರದಿ ನೋಡು |

ಬದುಕು ಸೊಗ ಹದದಿಂದ - ಮಂಕುತಿಮ್ಮ ||


379

ತೃಪ್ತಿಯರಿಯದ ವಾಂಛೆ, ಜೀರ್ಣಿಸದ ಭುಕ್ತಿವೊಲು |

ಗುಪ್ತದಲಿ ಕೊಳೆಯುತ್ತೆ ವಿಷಬೀಜವಾಗಿ ||

ಪ್ರಾಪ್ತಿಗೊಳಿಪುದು ಜೀವಕುನ್ಮಾದತಾಪಗಳ |

ಸುಪ್ತವಹುದೆಂತಿಚ್ಛೆ? - ಮಂಕುತಿಮ್ಮ ||


380

ಹುಲಿಯ ಕೆಣಕುವುದು ಹುಲಿ; ಕಪಿಯನಣಕಿಪುದು ಕಪಿ |

ಹುಲಿಕಪಿಗಳವಿತಿರದ ನರಜಂತುವೆಲ್ಲಿ? ||

ಮಲಗಿರುವ ಮೃಗವನಂತಿರಲು ಬಿಡುವುದೆ ಜಾಣು |

ಕುಲುಕದಿರು ಬಾಲವನು - ಮಂಕುತಿಮ್ಮ ||


381

ಅತಿಶಯದದೃಷ್ಟ ಹುಟ್ಟಿಂ ಮೃತೇಂದ್ರಿಯನದಲ? |

ಇತರರೊಳು ವಿಷಪರೀಕ್ಷೆಗೆ ನಿಲುವರಾರು? ||

ಮಿತಕುಕ್ಷಿ ಮಿತಭುಕ್ತ; ಮತ್ತಾರ್ ಜಿತೇಂದ್ರಿಯನು? |

ಅತಿಚರ್ಚೆ ಸಲದಲ್ಲಿ - ಮಂಕುತಿಮ್ಮ ||


382

ಇಂದ್ರಿಯವ ಜಯಿಸಿದೆಯೊ? ಮಂದವೋ ನಿನ್ನಕ್ಷಿ? |

ಸೌಂದರ್ಯ ಯಕ್ಷಿಣಿಯೆ ನಿನ್ನ ತೊರೆದಿಹಳೋ? ||

ಅಂಧನೆ ವಿರಕ್ತನ್; ಅಪ್ಸರೆಯ ಕಾಣದನೆ ಯತಿ |

ಕಂಡು ಕೆರಳದನಾರೊ! - ಮಂಕುತಿಮ್ಮ ||


383

ಜನಕಜೆಯ ದರುಶನದಿನಾಯ್ತು ರಾವಣ ಚಪಲ |

ಕನಕಮೃಗದರುಶನದೆ ಜಾನಕಿಯ ಚಪಲ ||

ಜನವವನ ನಿಂದಿಪುದು, ಕನಿಕರಿಪುದಾಕೆಯಲಿ |

ಮನದ ಬಗೆಯರಿಯದದು - ಮಂಕುತಿಮ್ಮ ||


384

ಹೊಟ್ಟೆಯಲಿ ಹಸಿವು, ಮನದಲಿ ಮಮತೆ---ಈ ಯೆರಡು |

ಗುಟ್ಟು ಕೀಲುಗಳಿಹುವು ಸೃಷ್ಟಿಯಂತ್ರದಲಿ ||

ಕಟ್ಟಿಪುವು ಕೋಟೆಗಳ, ಕೀಳಿಪುವು ತಾರೆಗಳ |

ಸೊಟ್ಟಾಗಿಪುವು ನಿನ್ನ - ಮಂಕುತಿಮ್ಮ ||


385

ದಾಸರೋ ನಾವೆಲ್ಲ ಶುನಕನಂದದಿ ಜಗದ |

ವಾಸನೆಗಳೆಳೆತಕ್ಕೆ ದಿಕ್ಕುದಿಕ್ಕಿನಲಿ ||

ಪಾಶಗಳು ಹೊರಗೆ, ಕೊಂಡಿಗಳು ನಮ್ಮೊಳಗಿಹುವು |

ವಾಸನಾಕ್ಷಯ ಮೋಕ್ಷ - ಮಂಕುತಿಮ್ಮ ||


386

ಹೃದಯದಬ್ಬರವೇನು ಹೊಟ್ಟೆಯುಬ್ಬರದಂತೆ |

ಅದರಿಳಿತ ಕೊರಳ ನಾಳದ ಸದ್ದಿನಿಂದ ||

ಅದೆ ನಗುವು ದುಗುಡಗಳು, ಅದೆ ಹೊಗಳು ತೆಗಳುಗಳು |

ಅದನಿಳಿಸೆ ಶಾಂತಿಯೆಲೊ - ಮಂಕುತಿಮ್ಮ ||


387

ರದನೋದಯಜ್ವರಕೆ ಸಿಲುಕದಿಹ ಶಿಶುವಿರದು |

ವಿಧಿಯೊದೆಗೆ ಸಿಕ್ಕದಿಹ ನರಜಂತುವಿರದು ||

ಒದೆಪೆಟ್ಟು ಮುಗಿದಂದು ರಾಹುದಂಷ್ಟ್ರದೆ ಹೊರಟ |

ವಿಧುಬಿಂಬವೋ ನೀನು - ಮಂಕುತಿಮ್ಮ ||


388

ದೇಹಾತುಮಂಗಳೆರಡಂಗಗಳು ಜೀವನಕೆ |

ನೇಹದಿಂದೊಂದನೊಂದಾದರಿಸೆ ಲೇಸು ||

ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ? |

ದ್ರೋಹ ಬೇಡೊಂದಕಂ - ಮಂಕುತಿಮ್ಮ ||


389

ಕಾಯವನು ಮೃದ್ಭಾಂಡ ಮಾಂಸಪಿಂಡವೆನುತ್ತೆ |

ಹೇಯವೆಂದೆಂದೊಡಾತ್ಮಂಗಪ್ಪುದೇನು? ||

ಆಯುಧವನದನು ತೊರೆದಾತ್ಮನೇಂಗೈದಪನು? |

ನ್ಯಾಯ ತನುವಿಗಮಿರಲಿ - ಮಂಕುತಿಮ್ಮ ||


390

ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು |

ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ? ||

ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ |

ಮುಳ್ಳಹುದು ಜೀವಕ್ಕೆ - ಮಂಕುತಿಮ್ಮ ||


391

ಹುರಿಯುರುಳೆ ಹಾವಲ್ಲವಾದೊಡಂ ಮಬ್ಬಿನಲಿ |

ಹರಿದಾಡಿದಂತಾಗೆ ನೋಳ್ಪವಂ ಬೆದರಿ ||

ಸುರಿಸುವಾ ಬೆವರು ದಿಟ; ಜಗುವುಮಂತುಟೆ ದಿಟವು |

ಜರೆಯದಿರು ತೋರ್ಕೆಗಳ - ಮಂಕುತಿಮ್ಮ ||


392

ಸೌಂದರ್ಯ ಬಾಂಧವ್ಯಗಳನು ಬರಿದೆನಲಹುದೆ? |

ಹೊಂದಿಸವೆ ಕುಂದಿಸವೆ ಜೀವಿಗಳನವುಗಳ್? ||

ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು |

ಅಂದಿಕೊಳಲದು ಬರಿದೆ? - ಮಂಕುತಿಮ್ಮ ||


393

ಎನಿತೆನಿತ್ತು ವಿಕಾರ ಪರಿಣಾಮಗಳ ನಮ್ಮ |

ಮನಕಾಗಿಪುವೊ ಲೋಕರೂಪಶಕ್ತಿಗಳು ||

ಅನಿತನಿತು ಸತ್ಯತೆಯವಕ್ಕುಂಟು ಜೀವಿತದಿ |

ಅನುಭವವೆ ದಿಟದಳತೆ - ಮಂಕುತಿಮ್ಮ ||


394

ಕನಸು ದಿಟ; ನೆನಸು ದಿಟ; ತನುವೊಳಿಹ ಚೇತನವ |

ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||

ಇನಿತನಿತು ದಿಟಗಳಿವು---ತುಂಬುದಿಟದಂಶಗಳು |

ಗಣನೀಯವವು ಬಾಳ್ಗೆ - ಮಂಕುತಿಮ್ಮ ||


395

ತುಂಬುದಿಟ ಜೀವಿತದ ಗಣನೆಗಳ ಮೀರಿದುದು |

ಇಂಬುಗಳ ಬಿಂಬಗಳ ಸನ್ನಿಧಾನವದು ||

ಅಂಬರದಿನಾಚಿನದು, ತುಂಬಿರುವುದೆತ್ತಲುಂ |

ಶಂಭು ಪರಬೊಮ್ಮನದು - ಮಂಕುತಿಮ್ಮ ||


396

ಕಲ್ಮಷದ ವಲ್ಮೀಕವೆಂದೊಡಲ ಜರೆಯದಿರು |

ಬ್ರಹ್ಮಪುರಿಯೆಂದದನು ಋಷಿಗಳೊರೆದಿಹರು ||

ಹಮ್ಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸೆ |

ನಮ್ಮ ಗುರಿಗೈದಿಪುದು - ಮಂಕುತಿಮ್ಮ ||


397

ದೇಹವೆಂಬುದು ಕುದುರೆಯಾತ್ಮನದರಾರೋಹಿ |

ವಾಹನವನುಪವಾಸವಿರಿಸೆ ನಡೆದೀತೆ? ||

ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ? |

ಸ್ನೇಹವೆರಡಕಮುಚಿತ - ಮಂಕುತಿಮ್ಮ ||


398

ಇರುವನ್ನಮೀ ಬಾಳು ದಿಟವದರ ವಿವರಣೆಯ |

ಹೊರೆ ನಮ್ಮ ಮೇಲಿಲ್ಲ ನಾದವರ ಸಿರಿಯ ||

ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುದೆ |

ಪುರುಷಾರ್ಥಸಾಧನೆಯೊ - ಮಂಕುತಿಮ್ಮ ||


399

ಕಾಯಮಾತ್ರದುದಲ್ಲವಾತ್ಮಮಾತ್ರದುದಲ್ಲ- |

ವಾಯೆರಡುಮೊಂದಾಗಲದು ಜೀವಲೀಲೆ ||

ತಾಯಿವೊಲು ನಿನಗಾತ್ಮ, ಮಡದಿವೊಲು ಕಾಯವವ- |

ರಾಯವನು ಸರಿನೋಡು - ಮಂಕುತಿಮ್ಮ ||


400

ದೃಶ್ಯವೆಲ್ಲವು ನಶ್ಯವಾದೊಡೇಂ? ದೃಷ್ಟಿಗದು |

ವಶ್ಯವಿರುವನಕದನು ದೃಷ್ಟಿಪುದೆ ಕಾರ್ಯಂ ||

ವಿಶ್ವಾನುಭವವೆ ವಿಶ್ವಾತ್ಮಾನುಭವಕೆ ಪಥ |

ನಶ್ಯದಿಂದವಿನಶ್ಯ - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post