Menu

Home ನಲಿಕಲಿ About ☰ Menu


 

🔍

ಶಿಕ್ಷಕರ ದಿನಾಚರಣೆ - 'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್'

    

        "ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ" ಇದು ಆದಿ ಶಂಕರರು ರಚಿಸಿದ ಶ್ಲೋಕ. ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ, ಈ ಲೋಕದ ಸೃಷ್ಟಿಕರ್ತ ಗುರು. ಆ ಮಹಾನ್ ಗುರುವಿನ ಪಾತ್ರ ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪಿಸುವಲ್ಲಿ ಅಲ್ಲದೇ ಒಂದು ದೇಶವನ್ನು ಕಟ್ಟಲು ಬಹಳ ಮಹತ್ವದಾಗಿದೆ. ಗುರುಕುಲ ಶಿಕ್ಷಣ ದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಅವರು ವ್ಯಕ್ತಿಯ ಆತ್ಮ ವಿಶ್ವಾಸ, ಬದುಕನ್ನು ಬಲಪಡಿಸುತ್ತಾರೆ. ಜೀವನದ ಪ್ರತಿಯೊಂದು ತಪ್ಪು, ಒಪ್ಪುಗಳನ್ನು ತಿದ್ದಿ ತೀಡಿ ಮತ್ತು ಜವಬ್ದಾರಿಯ ಬಗ್ಗೆ ಕಲಿಸಿ ಕೊಡುತ್ತಾರೆ. ಇಂತಹ ಗುರುವಿಗೆ ಗೌರವ ನೀಡಲು ಪ್ರತಿ ವರ್ಷ ಡಾ. ರಾಧಾಕೃಷ್ಣನ್ ಅವರ ಜನ್ಮದಿನ ಸೆಪ್ಟೆಂಬರ್ 5 ನ್ನು  ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.

     ಶಿಕ್ಷಕರು ನಮಗೆ ನಿಜವಾದ ಜೀವನ ವಿಧಾನವನ್ನು ಕಲಿಸುತ್ತಾರೆ. ಸರಿಯಾದ ಮಾರ್ಗವನ್ನು ಅನುಸರಿಸಲು ನಿಮ್ಮನ್ನು ಪ್ರೇರೇಪಿಸುತ್ತಾರೆ. ಜೀವನದಲ್ಲಿ ಪೋಷಕರ ಸ್ಥಾನವನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರು ನಮ್ಮನ್ನು ಈ ವರ್ಣರಂಜಿತ ಸುಂದರ ಜಗತ್ತಿನಲ್ಲಿ ತಂದವರು. ನಮ್ಮ ತಂದೆ ತಾಯಿಗಳು ಜೀವನದ ಮೊದಲ ಗುರುಗಳಾದರೆ ಎರಡನೇ ಸ್ಥಾನವನ್ನು ಶಿಕ್ಷಕರಿಗೆ ನೀಡಲಾಗುತ್ತದೆ.ಪ್ರತಿಯೊಬ್ಬರ ಜೀವನದಲ್ಲಿ ಗುರುವಿಗೆ ಹೆಚ್ಚಿನ ಮಹತ್ವವಿದೆ. ಸಮಾಜದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣದಲ್ಲಿ ಅಪಾರ ನಂಬಿಕೆ ಇಟ್ಟವರು. ಅವರು ಮಹಾನ್ ತತ್ವಜ್ಞಾನಿ ಮತ್ತು ಶಿಕ್ಷಕರಾಗಿದ್ದರು. ಅವರಿಗೆ ಬೋಧನೆಯಲ್ಲಿ ಆಳವಾದ ಪ್ರೀತಿ ಇತ್ತು. ಆದರ್ಶ ಶಿಕ್ಷಕನ ಎಲ್ಲಾ ಗುಣಗಳನ್ನು ಹೊಂದಿದ್ದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನದ ಸಂದರ್ಭದಲ್ಲಿ ಶಿಕ್ಷಕರಿಗೆ ಗೌರವವನ್ನು ತೋರಿಸಲು ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲು ತಿಳಿಸಿದರು. ಅಂದಿನಿಂದ ಈ ದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.


ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ 
ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಅವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ (1905 -1906) ಶಿಕ್ಷಣ ಪಡೆದಿದ್ದರು. ಶಿಕ್ಷಕರಾಗಿದ್ದ 'ಡಾ. ಸರ್ವಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು. ಇವರು ಒಬ್ಬ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. 

ಜನನ ಹಾಗೂ ವಿದ್ಯಾಭ್ಯಾಸ
'ಸರ್ವೆಪಲ್ಲಿ ರಾಧಾಕೃಷ್ಣನ್' ಸೆಪ್ಟೆಂಬರ್ 5, 1888 ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ' ಎಂಬಲ್ಲಿ ಜನಿಸಿದರು. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, 'ರಾಧಾಕೃಷ್ಣನ್' ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು.

     ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ. ಇವರು ಜಮೀನ್ದಾರರ ಬಳಿ ರೆವಿನ್ಯೂ ನೌಕರರಾಗಿ ಸೇವೆಗೈಯುತ್ತಾ ಮಗನ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು. ರಾಧಾಕೃಷ್ಣನ್ ಅವರ ತಂದೆಗೆ ತಮ್ಮ ಮಗನನ್ನು ಪುರೋಹಿತನನ್ನಾಗಿ ಮಾಡುವ ಹಂಬಲವಿತ್ತು.

     'ಸ್ಕಾಲರ್‌ಶಿಪ್ ಹಣ'ದಲ್ಲಿಯೇ ಎಲ್ಲ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲೆಯ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್, ಮದ್ರಾಸ್‌ (ಈಗಿನ ಚೆನ್ನೈ) ಕ್ರಿಶ್ಚಿಯನ್ ಕಾಲೇಜ್‌ ನಲ್ಲಿ 'ತತ್ವಜ್ಞಾನ' ವಿಷಯದ ಮೇಲೆ 'ಬಿ.ಎ' ಮತ್ತು 'ಎಂ.ಎ. ಪದವಿ'ಗಳನ್ನು ಪಡೆದು ಕೊಂಡರು. 'ಸ್ನಾತಕೋತ್ತರ ಪದವಿ'ಯಲ್ಲಿ ರಾಧಾಕೃಷ್ಣನ್ ಮಂಡಿಸಿದ ಪ್ರಬಂಧ 'ದಿ ಎಥಿಕ್ಸ್ ಆಫ್ ವೇದಾಂತ' ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಕೇವಲ ೨೦ ವರ್ಷದ ಬಾಲಕನ ತಲೆಯಲ್ಲಿದ್ದ 'ಹಲವು ಬಗೆಯ ಸಿದ್ಧಾಂತಗಳು', 'ವೇದಾಂತ ವಿಚಾರಗಳು' ಮುಂದೊಂದು ದಿನ ಅವರನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತವೆ, ಎಂದು ಅವರ ಕಾಲೇಜು ಶಿಕ್ಷಕರು ಆಗಲೇ ಗುರುತಿಸಿದ್ದರು.

ವಿವಾಹ
ವೆಲ್ಲೂರಿನಲ್ಲಿರುವಾಗಲೇ ಕೇವಲ 16 ನೇ ವಯಸ್ಸಿನಲ್ಲಿ ಶಿವಕಾಮಮ್ಮ ಎಂಬುವವರನ್ನು ಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, 1909 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆ ಯನ್ನಾರಂಭಿಸಿದರು.

ಮಹಾ ಶಿಕ್ಷಕನಾಗಿ
ಭಾರತದ ಸನಾತನ ಧರ್ಮವಾದ ಹಿಂದೂ ಧರ್ಮದ ಸಾರ, ವೇದ, ಉಪನಿಷತ್, ಜೈನ ತತ್ವಜ್ಞಾನ, ಶಂಕರ ರಾಮಾನುಜ, ಮಧ್ವ, ಪ್ಲೇಟೋ, ಪ್ಲಾಟಿನಸ್, ಕಾಂತ್, ಬ್ರ್ಯಾಡ್ಲೆ ಮುಂತಾದ ಮಹನೀಯರ ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಕೈಗೊಂಡರು. ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಮೇಲೇರುತ್ತಾ ಮುನ್ನಡೆದರು.

    ರಾಧಾಕೃಷ್ಣನ್ 1918ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ, ತತ್ವಜ್ಞಾನ ವಿಭಾಗದ ಉಪನ್ಯಾಸಕರಾಗಿ ಆಯ್ಕೆಯಾದರು. ದೇಶ ವಿದೇಶಗಳ ವಿವಿಧ ತತ್ವಜ್ಞಾನ ಪತ್ರಿಕೆಗಳಲ್ಲಿ ತಮ್ಮ ಆಳ ಮತ್ತು ಹರಿತವಾದ ವಿಚಾರಗಳನ್ನು ಹೊಂದಿದ್ದ ಲೇಖನಗಳನ್ನು ಬರೆಯುತ್ತಾ ಸಾಗಿದ ರಾಧಾಕೃಷ್ಣನ್, 'ದಿ ಫಿಲಾಸಫಿ ಆಫ್ ರವೀಂದ್ರನಾಥ್ ಠ್ಯಾಗೋರ್' ಎಂಬ ಮೊದಲ ಪುಸ್ತಕ ಬರೆದರು. ಇವರು ತೆಲುಗಿನಲ್ಲಿ ತಮ್ಮ ಸಹಿಯನ್ನು "ರಾಧಾಕ್ರಿಶ್ಣಯ್ಯ"ಎಂದು ಹಾಕುತಿದ್ದರು. ಮೈಸೂರಿನಲ್ಲಿ ಇವರ ಹೆಸರಿನ ರಸ್ತೆಯೊಂದಿದೆ.

ತತ್ವಶಾಸ್ತ್ರದಲ್ಲಿ ಅನುಪಮ ಕೊಡುಗೆ
       ಭಾರತೀಯ ಪುಸ್ತಕೋದ್ಯಮದಲ್ಲಿ ಮಿಂಚುತ್ತಾ ಸಾಗಿದ ಇವರು, ಮುಂದೆ 'ಜಿನೀನ್ ಮೆನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್' ಮತ್ತು 'ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ' ಎನ್ನುವ ಪುಸ್ತಕಗಳನ್ನು ಸಹ ಬರೆದಿದ್ದಾರೆ. ತಮ್ಮ ಅಪಾರವಾದ ಪಾಂಡಿತ್ಯದಿಂದಾಗಿ ದೇಶ ವಿದೇಶಗಳಲ್ಲಿ ಮನೆಮಾತಾಗಿದ್ದರು. ಇವರ ತತ್ವಜ್ಞಾನಕ್ಕೆ ಶರಣಾದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ 'ಧರ್ಮ ಮತ್ತು ನೀತಿಶಾಸ್ತ್ರ' ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡುವಂತೆ ಆಹ್ವಾನಿಸಿತು.

   ಸಪ್ತಸಾಗರಗಳಾಚೆ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತೀಯ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ ರಾಧಾಕೃಷ್ಣನ್, ಭಾರತೀಯ ಸನಾತನ ಧರ್ಮ, ತತ್ವಜ್ಞಾನ ಕುರಿತು ವಿದೇಶಿಯರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಟ್ಟು ಬಂದರು.

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳು
        1931 ರಲ್ಲಿ ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು. 1939ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು.

        ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲ ದಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

        1951-52 ರಲ್ಲಿ ಭಾರತದ ಶಿಕ್ಷಕನೊಬ್ಬ ಮೊಟ್ಟಮೊದಲ ಉಪರಾಷ್ಟ್ರಪತಿಯಾಗಿ ನೇಮಕಗೊಂಡ 'ರಾಧಾಕೃಷ್ಣನ್', ರಾಜ್ಯಸಭೆಯಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಎಲ್ಲ ಸಂಸತ್ ಸದಸ್ಯರ ಗಮನ ಸೆಳೆಯುತ್ತಿದ್ದರು. 'ರಾಧಾಕೃಷ್ಣನ್' ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ 1954 ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು.

    ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಗುರು ಉಪರಾಷ್ಟ್ರಪತಿಯಾಗಿ ದೆಹಲಿಗೆ ಹೊರಡುವ ಸಂದರ್ಭದಲ್ಲಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ಅವರನ್ನು ಕಳುಹಿಸಿ ಕೊಡಲು ಸಾರೋಟನ್ನು ತಂದು ಅಲಂಕರಿಸಿ, ಕುದುರೆಯ ಬದಲು ತಾವೇ ಕುದುರೆಗಳಂತೆ, ರಾಧಾಕೃಷ್ಣನ್ ಅವರು ಕುಳಿತ ಸಾರೋಟನ್ನು ಪ್ರೀತಿಪೂರ್ವಕವಾಗಿ ರೈಲ್ವೆ ನಿಲ್ದಾಣದವರೆಗೂ ಎಳೆದು ಕೊಂಡು ಹೋಗಿ, ಭಾವಪೂರ್ಣ ವಿದಾಯ ಹೇಳಿದ್ದರು. ಈ ಸನ್ನಿವೇಶವನ್ನು ಕಂಡು ರಾಧಾಕೃಷ್ಣನ್ ಅವರು ಭಾವುಕರಾಗಿದ್ದರಂತೆ. ಅವರು ಆಗಾಗ ಈ ಸಂದರ್ಭವನ್ನು ನೆನೆಸಿಕೊಳ್ಳುತ್ತಿದ್ದರು.

          ಇದೇ ಸಂದರ್ಭದಲ್ಲಿ ರಾಧಾಕೃಷ್ಣನ್ ಕುರಿತು ಅಮೆರಿಕಾದಲ್ಲಿ 'ಫಿಲಾಸಫಿ ಆಫ್ ಡಾ.ಸರ್ವಪಲ್ಲಿ ರಾಧಾಕೃಷ್ಣನ್' ಪುಸ್ತಕ ಬಿಡುಗಡೆಗೊಂಡಿತು. 'ಡಾ. ರಾಜೇಂದ್ರ ಪ್ರಸಾದ್' ನಂತರ, 1962ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ದೇಶದ ಸರ್ವತೋಮುಖ ಏಳಿಗೆಗೆ ಅವಿರತ ಶ್ರಮಿಸಿದರು. 

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧಗಳನ್ನು ಉನ್ನತೀಕರಣಗೊಳಿಸುತ್ತಾ, ದೇಶದೊಳಗಿನ ಆಂತರಿಕ ಕಲಹಗಳಿಗೆ ತಿಲಾಂಜಲಿ ನೀಡುತ್ತಾ, ದೇಶವನ್ನು ಸುಭಿಕ್ಷವಾಗಿಸಿದ ಕೀರ್ತಿ 'ಡಾ.ರಾಧಾ ಕೃಷ್ಣನ್' ಅವರಿಗೆ ಸಲ್ಲುತ್ತದೆ. ಆಯ್ಕೆಯಾದ ರಾಧಾಕೃಷ್ಣನ್, ಐದು ವರ್ಷಗಳ ಕಾಲ ತಾವೊಬ್ಬ ಉತ್ತಮ ಶಿಕ್ಷಣ ಸುಧಾರಕರೂ ಹೌದು ಎಂಬುದನ್ನು ತಮ್ಮ ಸೇವಾವಧಿಯಲ್ಲಿ ತೋರಿಸಿಕೊಟ್ಟರು. ಇವರ ಅವಧಿಯಲ್ಲಿ ವಿಶ್ವವಿದ್ಯಾಲಯ ಅನೇಕ ಶಿಕ್ಷಣ ಮತ್ತು ಶಿಕ್ಷಣೇತರ ಸುಧಾರಣೆಗಳನ್ನು ಕಂಡಿತು.

1939 ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಲ್ಲಿಯೂ ತಮ್ಮ ಅನುಭವವನ್ನು ಧಾರೆ ಎರೆಯುವ ಮೂಲಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ರಾಧಾಕೃಷ್ಣನ್ ಅವರನ್ನು, 1948 ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗದ ಮುಖ್ಯಸ್ಥರನ್ನಾಗಿ ಸರಕಾರ ನೇಮಿಸಿತು. 1949 ರಲ್ಲಿ ಸೋವಿಯತ್ ರಷ್ಯಾಕ್ಕೆ ಭಾರತದ ರಾಯಭಾರಿಯಾಗಿ ನೇಮಕಗೊಂಡ ರಾಧಾಕೃಷ್ಣನ್, ಸ್ಟಾಲಿನ್‌ನಂತಹ ಮೇಧಾವಿಗಳ ಸರಿಸಮನಾಗಿ ನಿಲ್ಲುವ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ನಿಧನ
   ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ 1967ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, 1975 ರ ಏಪ್ರಿಲ್ 17 ರಂದು ಇಹಲೋಕ ತ್ಯಜಿಸಿದರು.

ಗುರುವಿನ ಕುರಿತು ಮಹಾನ್ ವ್ಯಕ್ತಿಗಳ ಹೇಳಿಕೆಗಳು.
ನಮ್ಮ ಬಗ್ಗೆ ಯೋಚಿಸಲು ಸಹಾಯ ಮಾಡುವವರೇ ನಿಜವಾದ ಶಿಕ್ಷಕರು - ಡಾ.ಸರ್ವೆಪಲ್ಲಿ ರಾಧಾಕೃಷ್ಣನ್.

ಶಿಕ್ಷಣವು ಮನುಷ್ಯನಲ್ಲಿ ಹುದುಗಿರುವ ಅಂತಃಶಕ್ತಿಯನ್ನು ಹೊರಗೆಳೆಯುವುದೇ ಶಿಕ್ಷಣ - ಸ್ವಾಮಿ ವಿವೇಕಾನಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವವರು ಪೋಷಕರಿಗಿಂತ ಹೆಚ್ಚು ಗೌರವಾನ್ವಿತರು, ಏಕೆಂದರೆ ಪೋಷಕರು ಜೀವನವನ್ನು ನೀಡಿದರು, ಚೆನ್ನಾಗಿ ಬದುಕುವುದನ್ನು ಕಲಿಸಿಕೊಡುವವರು ಶಿಕ್ಷಕ - ಅರಿಸ್ಟಾಟಲ್.

ಉತ್ತಮ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಉತ್ತಮ ಮಾರ್ಗದಲ್ಲಿ ಹೇಗೆ ನಡೆಸಬೇಕೆಂದು ತಿಳಿದಿದೆ - ಚಾರ್ಲ್ಸ್ ಕುರಾಲ್ಟ್.

ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಬೇಕಾದರೆ ಮತ್ತು ಸುಂದರವಾದ ಮನಸ್ಸಿನ ರಾಷ್ಟ್ರವಾಗಬೇಕಾದರೆ, ಮೂರು ಪ್ರಮುಖ ಸಾಮಾಜಿಕ ಸದಸ್ಯರು ಬದಲಾವಣೆಯನ್ನು ಮಾಡಬಹುದು ಎಂದು ನಾನು ಬಲವಾಗಿ ಭಾವಿಸುತ್ತೇನೆ. ಅವರೇ ತಂದೆ, ತಾಯಿ ಮತ್ತು ಗುರು - ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.

ಶಿಕ್ಷಣವೆಂದರೆ ಬಟ್ಟಲು ತುಂಬುವುದು ಅಲ್ಲ, ಬೆಂಕಿಯನ್ನು ಬೆಳಗಿಸುವುದು - ವಿಲಿಯಂ ಬಟ್ಲರ್ ಯೀಟ್ಸ್.

ಉತ್ತಮ ಶಿಕ್ಷಕ ಮೇಣದ ಬತ್ತಿಯಂತೆ - ಅದು ಇತರರಿಗೆ ದಾರಿಯನ್ನು ತೋರಿಸಲು ಬೆಳಗುವ ಮೂಲಕ ತನ್ನನ್ನು ತಾನೇ ಸವಿಸುತ್ತದೆ - ಮುಸ್ತಫಾ ಕೆಮಾಲ್ ಅಟತುರ್ಕ್.

ಶಿಕ್ಷಣವು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ - ನೆಲ್ಸನ್ ಮಂಡೇಲಾ.

ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಬ್ಬ ಶಿಕ್ಷಕ ಜಗತ್ತನ್ನು ಬದಲಾಯಿಸಬಹುದು - ಮಲಾಲಾ ಯೂಸುಫ್‌ಜಾಯ್.

ಬೋಧನೆಯ ಕಲೆಯು ಅನ್ವೇಷಣೆಗೆ ಸಹಾಯ ಮಾಡುವ ಕಲೆಯಾಗಿದೆ - ಮಾರ್ಕ್ ವ್ಯಾನ್ ಡೋರೆನ್.

ನಿಜವಾಗಿಯೂ ಬುದ್ಧಿವಂತನಾದ ಶಿಕ್ಷಕನು ತನ್ನ ಬುದ್ಧಿವಂತಿಕೆಯ ಮನೆಯನ್ನು ಪ್ರವೇಶಿಸಲು ನಿಮ್ಮನ್ನು ಆಜ್ಞಾಪಿಸುವುದಿಲ್ಲ ಆದರೆ ನಿಮ್ಮ ಆಸಕ್ತಿಯ ಹೊಸ್ತಿಲಿಗೆ ನಿಮ್ಮನ್ನು ಕರೆದೊಯ್ಯುತ್ತಾನೆ - ಖಲೀಲ್ ಗಿಬ್ರಾನ್.

ಬೋಧನೆಯು ವ್ಯಕ್ತಿಯ ಪಾತ್ರ, ಸಾಮರ್ಥ್ಯ ಮತ್ತು ಭವಿಷ್ಯವನ್ನು ರೂಪಿಸುವ ಅತ್ಯಂತ ಉದಾತ್ತ ವೃತ್ತಿಯಾಗಿದೆ. ಜನರು ನನ್ನನ್ನು ಉತ್ತಮ ಶಿಕ್ಷಕ ಎಂದು ಸ್ಮರಿಸಿದರೆ ಅದೇ ನನಗೆ ದೊಡ್ಡ ಗೌರವ - ಎ.ಪಿ.ಜೆ ಅಬ್ದುಲ್ ಕಲಾಂ.

ಶಿಷ್ಯನಿಗೆ ನಿಜವಾದ ಪಠ್ಯಪುಸ್ತಕ ಅವನ ಗುರು ಎಂದು ನಾನು ಯಾವಾಗಲೂ ಭಾವಿಸಿದೆ- ಮಹಾತ್ಮ ಗಾಂಧಿ.

ಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಮತ್ತು ಪ್ರಮುಖ ಸದಸ್ಯರು, ಏಕೆಂದರೆ ಅವರ ವೃತ್ತಿಪರ ಪ್ರಯತ್ನಗಳು ಭೂಮಿಯ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ- ಹೆಲೆನ್ ಕ್ಯಾಲ್ಡಿಕಾಟ್.

ತಂತ್ರಜ್ಞಾನವು ಕೇವಲ ಒಂದು ಸಾಧನವಾಗಿದೆ. ಮಕ್ಕಳನ್ನು ಒಟ್ಟಿಗೆ ಕೆಲಸ ಮಾಡಲು ಮತ್ತು ಅವರನ್ನು ಪ್ರೇರೇಪಿಸುವ ವಿಷಯದಲ್ಲಿ, ಶಿಕ್ಷಕ ಅತ್ಯಂತ ಮುಖ್ಯ ಪಾತ್ರ ನಿರ್ವಹಿಸುತ್ತಾರೆ - ಬಿಲ್ ಗೇಟ್ಸ್.

ಸೃಜನಶೀಲತೆ ಮತ್ತು ಜ್ಞಾನ ಗ್ರಹಿಕೆಯಲ್ಲಿ ಆಸಕ್ತಿಯನ್ನು ಕಾಪಾಡುವುದು ಶಿಕ್ಷಕರ ಪರಮೋಚ್ಚ ಕಲೆ - ಆಲ್ಬರ್ಟ್ ಐನ್ಸ್ಟೈನ್.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post