Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 151-200

 151

ದೈವವೆನಿಸಿರುತೆ ವಿಶ್ವಪ್ರಕೃತಿಶಕ್ತಿಯಲಿ |

ಜೀವವಾಸನೆಗಳಲಿ ಪೂರ್ವಕೃತವೆನಿಸಿ ||

ಧೀವರ್ತನೆಯಲಿ ಪೌರುಷವೆನಿಸಿ ಪರಸತ್ತ್ವ |

ತ್ರೈವಿಧದೊಳಿರುತಿಹುದು - ಮಂಕುತಿಮ್ಮ ||


152

ಪುಣ್ಯಪಾಪ ಋಣಾನುಬಂಧ ವಾಸನೆಗಳಿವು |

ಜನ್ಮಾಂತರದ ಕರ್ಮಶೇಷದಂಶಗಳು ||

ಎಣ್ಣಿಕೆಗೆ ಸಿಲುಕದಾಕಸ್ಮಿಕ ಯದೃಚ್ಛೆಗಳು |

ಸನ್ನಿಹಿತ ದೈವಿಕದೆ - ಮಂಕುತಿಮ್ಮ ||


153

ಪ್ರಾರಬ್ಧಕರ್ಮಮುಂ ದೈವಿಕದ ಲೀಲೆಯುಂ |

ತೋರುವುವದೃಷ್ಟವಿಧಿಯೆಂಬ ಪೆಸರುಗಳಿಂ ||

ಆರುಮಳೆವವರಿಲ್ಲವವುಗಳಾವೇಗಗಳ |

ಪೌರುಷವು ನವಸತ್ತ್ವ - ಮಂಕುತಿಮ್ಮ ||


154

ಪೊಸರಸಂ ಬೇರಿಗನುದಿನಮೊದವಿ ಧರೆಯಿಂದ |

ಸಸಿಗೆ ಹೊಸತಳಿರ ತಲೆಯಲಿ ಮುಡಿಸುವಂತೆ ||

ಹೊಸ ಸೃಷ್ಟಿಸತ್ತ್ವಮೆತ್ತಣಿನೊ ಬರುತನುದಿನಂ |

ಪೊಸತಾಗಿಪುದು ಜಗವ - ಮಂಕುತಿಮ್ಮ ||


155

ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು |

ತುಸಿರಾಗಿ ನಮ್ಮೊಳಾವಗಮಾಡುವಂತೆ ||

ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ |

ಮ್ಮಸುಗಳೊಳವೊಗುತಿಹುದು - ಮಂಕುತಿಮ್ಮ ||


156

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ |

ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||

ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |

ಬಾಯ ಚಪ್ಪರಿಸುವನು - ಮಂಕುತಿಮ್ಮ ||


157

ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ |

ನರಜಾತಿ ಸಾನುಭೂತಿಯ ಕಲಿಯಲೆಂದು ||

ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತ್ತೆ |

ಬೆರೆ ನೀನು ವಿಶ್ವದಲಿ - ಮಂಕುತಿಮ್ಮ ||


158

ಕರವೆರಡದೃಷ್ಟಕ್ಕೆ : ನರನ ಪೂರ್ವಕವೊಂದು |

ಪೆರತೊಂದು ನವಸೃಷ್ಟಿಸತ್ತ್ವವಾ ಬೊಗಸೆ ||

ಧರಿಸಿಹುದು ಮನುಜಜೀವಿತವನದರೊತ್ತಡದೆ |

ಪರಿದಾಟ ನಮಗೆಲ್ಲ - ಮಂಕುತಿಮ್ಮ ||


159

ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ |

ಭೂಪುಟದಿ ಜೀವರಸಗಳ ಪಚಿಸುವಂತೆ ||

ಪಾಪಿಯಂ ಪ್ರೋತ್ಸಹಿಸಿ ಸುಕೃತಿಯ ಪರೀಕ್ಷಿಸುತ |

ವೇಪಿಪನು ವಿಧಿ ನಮ್ಮ - ಮಂಕುತಿಮ್ಮ ||


160

ಆವ ಬೇಳೆಯದಾವ ನೀರಿನಲಿ ಬೇಯುವುದೊ! |

ಆವ ಜೀವದ ಪಾಕವಾವ ತಾಪದಿನೋ! ||

ಆ ವಿವರವನು ಕಾಣದಾಕ್ಷೇಪಣೆಯದೇನು? |

ದೈವಗುಟ್ಟದು ತಿಳಿಯೆ - ಮಂಕುತಿಮ್ಮ ||


161

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? |

ಬೆದರಿಕೆಯನದರಿಂದ ನೀಗಿಪನು ಸಖನು ||

ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ |

ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ||


162

ಟಗರೆರಡ ಬೆಳಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ |

ಜಗಳವಾಡಿಸಿ ದೈವಜೀವಗಳ ಪೆಸರಿಂ ||

ನಗುತಲಿರುವನು ನೋಡಿ; ಪರಬೊಮ್ಮನೇಂ ಬಿನದಿ! |

ಬಿಗಿಯದಿರು ನೀಂ ಬೀಗಿ - ಮಂಕುತಿಮ್ಮ ||


163

ಮಾನುಷ್ಯಚರಿತೆಯಚ್ಛಿನ್ನವಾಹಿನಿ ಸಾಗ |

ಲಾನುಪೂರ್ವ್ಯದ ಕರ್ಮಋಣಶೇಷವಿನಿತು ||

ತಾನಿರಲೆಬೇಕಲ್ತೆ ಪೌರುಷಸ್ಪರ್ಧನೆಗೆ |

ಆನೆಗಂಕುಶದಂತೆ - ಮಂಕುತಿಮ್ಮ ||


164

ಹಳೆಯ ಮಲೆ ಹಳೆಯ ನೆಲವಾದೊಡೆಯುಮೊರತೆ ಮಳೆ |

ಹೊಳೆನೀರನಾವಗಂ ಪೊಸದಾಗಿಸುವವೊಲ್ ||

ಹಳೆಯ ಕರ್ಮವ ಹೊಸದು ಕೊಚ್ಚಿ ಪೌರುಷನದಿಯ |

ಬೆಳೆಯಿಪುದು ನವತೆಯಲಿ - ಮಂಕುತಿಮ್ಮ ||


165

ಹೊಸಹೊಸದು ತಾನಾಗುತಿರ್ದೊಡಂ ತನ್ನಯ |

ಪ್ರಸವ ಪ್ರವಾಹ ಭೂಮಿಗಳ ಹಳೆತನದಿಂ ||

ನಸುಸೋಂಕು ವಾಸನೆಯ ಪೊನಲೊಂದಬೇಕಲ್ತೆ? |

ಹೊಸದು ಹಳದಾಗದೇ - ಮಂಕುತಿಮ್ಮ ||


166

ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ |

ಕಡಲೊಳೆತ್ತಲೊ ಹೊಸ ದ್ವೀಪವೇಳುವುದು ||

ಕಳೆಯುತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊ |

ಅಳಿವಿಲ್ಲ ವಿಶ್ವಕ್ಕೆ - ಮಂಕುತಿಮ್ಮ ||


167

ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು |

ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ||

ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ |

ಅತಿಚರಿತೆ ಪ್ರಕೃತಿಯಲಿ - ಮಂಕುತಿಮ್ಮ ||


168

ಅನುಬಂಧ ಜೀವಜೀವಕೆ ಪುರಾಕೃತದಿಂದ |

ಮನದ ರಾಗದ್ವೇಷವಾಸನೆಗಳದರಿಂ ||

ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು |

ಕೊನೆಯಿರದ ಬಲೆಯೊ ಅದು - ಮಂಕುತಿಮ್ಮ ||


169

ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ |

ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ||

ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ |

ಕುಣಿವ ಗರ್ದಭ ನೀನು - ಮಂಕುತಿಮ್ಮ ||


170

ಉಣುವುದುಡುವುದು ಪಡುವುದಾಡುವುದು ಮಾಡುವುದು |

ಋಣಗಳೆಲ್ಲವು ಪೂರ್ವಸಂಚಿತಾಂಶಗಳು ||

ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ |

ಗೊಣಗಾಟವಳಿಸುವುದೆ? - ಮಂಕುತಿಮ್ಮ ||


171

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ |

ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ ||

ಇಂದು ಬರಿಯುಪವಾಸ, ನಾಳೆ ಪಾರಣೆ---ಯಿಂತು |

ಸಂದಿರುವುದನ್ನಋಣ - ಮಂಕುತಿಮ್ಮ ||


172

ಅರಿ ಮಿತ್ರ ಸತಿ ಪುತ್ರ ಬಂಧುಬಳಗವದೆಲ್ಲ |

ಕರುಮದವತಾರಗಳೊ, ಋಣಲತೆಯ ಚಿಗುರೋ ||

ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ |

ವುರಿಮಾರಿಯಾದೀತೊ - ಮಂಕುತಿಮ್ಮ ||


173

ಬಂಧುಬಳಗವುಮಂತಕನ ಚಮುವೊ, ಛದ್ಮಚಮು |

ದಂದುಗದ ಬಾಗಿನಗಳವರ ನಲುಮೆಗಳು ||

ಕುಂದಿಪ್ಪುವಾತ್ಮನನವರ್ಗಳುಪಕಾರಗಳು |

ಮಂದಿಗಾಗದಿರು ಬಲಿ - ಮಂಕುತಿಮ್ಮ ||


174

ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ? |

ಹೊಂದಿರುವರವರ್ ಅಹಂತೆಯು ಮೊಳೆಯುವನಕ ||

ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ? |

ಬಂಧ ಮುರಿವುದು ಬಳಿಕ - ಮಂಕುತಿಮ್ಮ ||


175

ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ |

ಯಕ್ಷಿಯರು ಮ್ಯಾಕ್ಬೆತನಿಗೆಸಗಿದುಪದೇಶ |

ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? |

ಅಕ್ಷಿ ನಿರ್ಮಲವೇನೊ? - ಮಂಕುತಿಮ್ಮ ||


176

ಇಂಗಿತಜ್ಞಾನವಿಲ್ಲದ ಬಂಧುಪರಿವಾರ |

ಹಂಗಿಸುವ ಛಲವುಳ್ಳ ಸತಿಪುತ್ರಸಖರು ||

ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ |

ಮಂಗಬುದ್ಧಿಯ ಜನರು - ಮಂಕುತಿಮ್ಮ ||


177

ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ |

ದಂಡಧರನೋಲಗಕೆ ನಿನ್ನನೆಳೆವವರೋ ||

ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ |

ಮಂದಹಸಿತದ ಕೊಲೆಯೊ - ಮಂಕುತಿಮ್ಮ ||


178

ದ್ವೇಷರೋಷಗಳವೊಲೆ ನೇಹಮುಂ ಮೋಹಮುಂ |

ಪಾಶವಾಗಲ್ಪಹುದು ನಿನಗೆ ಮೈಮರಸಿ ||

ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ |

ಮೋಸದಲಿ ಕೊಲ್ಲುವುವೊ - ಮಂಕುತಿಮ್ಮ ||


179

ಕರುಮ ಬಂದಿದಿರಹುದು ಮೋಹನದ ರೂಪಿನಲಿ |

ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ||

ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ |

ತರಳತೆಯದೇಂ ತಂತ್ರ? - ಮಂಕುತಿಮ್ಮ ||


180

ಮೃತ್ಯು ತಾಂ ಬಂದು ಮೋಹಿನಿಯ ರೂಪದಿ ನಿನ್ನ |

ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ||

ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ |

ಹತ್ಯೆಯಲಿ ಹರುಷಿಪಳೊ - ಮಂಕುತಿಮ್ಮ ||


181

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ |

ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ ||

ಕುಣಿಕೆಯನು ನಿನ್ನ ಕೊರಳಿಗೆ ಹೂಡಿ ಚಿರಕಾಲ |

ವಣುವಣುವೆ ಬಿಗಿಯುವುವೊ - ಮಂಕುತಿಮ್ಮ ||


182

ಋಣದ ಜಾಲವನಂತ, ಕರುಮಚಕ್ರವನಂತ |

ಜನುಮಜನುಮದ ಕಥೆಯ ತಂತುಗಳನಂತ ||

ಅನವರತ ನೂತನವಿದೆನಿಪ ವಿಶ್ವದ ತಂತ್ರ |

ಬಿನದ ಪರಬೊಮ್ಮಂಗೆ - ಮಂಕುತಿಮ್ಮ ||


183

ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ |

ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ||

ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು |

ಧನ್ಯನುಭಯವ ಮೀರೆ - ಮಂಕುತಿಮ್ಮ ||


184

ನೋಡುನೋಡುತ ಲೋಕಸಹವಾಸ ಸಾಕಹುದು |

ಬಾಡುತಿಹ ಹೂಮಾಲೆ, ಗೂಢವಿಹ ಕಜ್ಜಿ ||

ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ |

ನೋಡಾಡು ಹಗುರದಿಂ - ಮಂಕುತಿಮ್ಮ ||


185

ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? |

ಮಧುರಭಾವ ಪ್ರೇಮ ದಯೆಯೆಲ್ಲ ಬರಿದೆ? ||

ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ |

ಬದುಕಿನಲಿ ತಿರುಳೇನು? - ಮಂಕುತಿಮ್ಮ ||


186

ತಡಕಾಟ ಬದುಕೆಲ್ಲವೇಕಾಕಿಜೀವ ತ |

ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ ||

ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ |

ಮಡುವೊಳೋಲಾಡುತ್ತೆ - ಮಂಕುತಿಮ್ಮ ||


187

ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ |

ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ ||

ಬಿಡಿಜೀವ ಸಂಗಾತಿಜೀವಗಳನರಸಿ ತಾಂ |

ಪಡೆದಂದು ಪೂರ್ಣವದು - ಮಂಕುತಿಮ್ಮ ||


188

ರಸರುಚಿಗಳನು ಕಲಿಸಿ ಪಕ್ವಾನ್ನಗಳ ಪಚಿಸಿ |

ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ ||

ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು |

ವಶನಾಗದಿಹ ನರನು? - ಮಂಕುತಿಮ್ಮ ||


189

ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವ |

ಪರಿಪರಿಯ ಫಲಮಧುರಗಳ ರಸನೆಗುಣಿಪ ||

ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ |

ಗುರು ಸೃಷ್ಟಿ ರಸಿಕತೆಗೆ - ಮಂಕುತಿಮ್ಮ ||


190

ಅಮೃತಕಣವಂ ಮರ್ತ್ಯಮೃದ್ಘಟದಿ ಬಯ್ತಿರಿಸಿ |

ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ ||

ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು |

ಕಮ್ರತೆಯೊ ನಮ್ರತೆಯೊ? - ಮಂಕುತಿಮ್ಮ ||


191

ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನ |

ತಡಕುವನು; ತನ್ನಾತ್ಮದುಣಿಸ ಮರೆಯುವನು ||

ಒಡಲಿನಬ್ಬರವೇನು? ಆತುಮದ ನಾಣ್ಚೇನು? |

ಪೊಡವಿಗಿದೆ ದುಮ್ಮಾನ - ಮಂಕುತಿಮ್ಮ ||


192

ದೇವದಾನವರ ರಣರಂಗ ಮಾನವಹೃದಯ |

ಭಾವ ರಾಗ ಹಠಂಗಳವರ ಸೇನೆಗಳು ||

ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು |

ಜೀವಾಮೃತವನವರು - ಮಂಕುತಿಮ್ಮ ||


193

ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದ |

ನೆರಡುಕೈಯಿಂದೆರಡು ಜಂತುಗಳ ಬಳಿಕ ||

ಇರದೆ ತಾನವನೊಂದುಗೂಡಿಸಲು ಬೆರಗಾಯ್ತು |

ನರಿಯು ವಾನರವು ನರ - ಮಂಕುತಿಮ್ಮ ||


194

ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು? |

ಆಂತರಗಭೀರಗಳ ತಾನೆ ಕಂಡವನಾರ್? ||

ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ |

ಸ್ವಂತಕೇ ದುರ್ದರ್ಶ - ಮಂಕುತಿಮ್ಮ ||


195

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ |

ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ||

ಸೊಗಸಿನೆಳಸಿಕೆಗೊಂದು, ತನ್ನಾತ್ಮಕಿನ್ನೊಂದು |

ಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ ||


196

ಮನುಜಲೋಕವಿಕಾರಗಳನು ನೀನಳಿಸುವೊಡೆ |

ಮನಕೊಂದು ದರ್ಪಣವ ನಿರವಿಸೆಂತಾನುಂ ||

ಅನುಭವಿಪರವರಂದು ತಮ್ಮಂತರಂಗಗಳ |

ಅನುಪಮಾಸಹ್ಯಗಳ - ಮಂಕುತಿಮ್ಮ ||


197

ಕನಲ್ದ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗ |

ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ ||

ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ |

ವಣಗಿಹುವು ನರಮನದಿ - ಮಂಕುತಿಮ್ಮ ||


198

ಸತ್ಯವಂತನನರಸಲೆನುತ ಪೇಟೆಗಳೊಳಗೆ |

ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||

ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು |

ತಾತ್ತ್ವಿಕ ಡಯೋಜೆನಿಸ್ - ಮಂಕುತಿಮ್ಮ ||


199

ಪದರಪದರಗಳಿಹುವು ಗಂಟುಗಂಟುಗಳಿಹುವು |

ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ ||

ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ? |

ವಿಧಿಯ ಕೈಚಿತ್ರವದು - ಮಂಕುತಿಮ್ಮ ||


200

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ |

ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ||

ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ |

ದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post